ಪ್ರಧಾನಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಆಡಳಿತ ಪರಿಷತ್ತಿನ ಸಭೆ

ನವದೆಹಲಿ, ಜೂನ್ 15 – ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ  ನೀತಿ ಆಯೋಗ ಆಡಳಿತ ಪರಿಷತ್ತಿನ 5ನೇ ಸಭೆ ನಡೆಯುತ್ತಿದೆ.

ಇದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡನೇ ಬಾರಿಗೆ ಜಯಭೇರಿ ಬಾರಿಸಿದ ನಂತರ ನಡೆಯತ್ತಿರುವ ಮೊದಲನೇ ಸಭೆಯಾಗಿದ್ದು, ‘ಏಕ್ ಭಾರತ್, ಶ್ರೇಷ್ಠ ಭಾರತ್ ‘ ಧ್ಯೇಯದೊಂದಿಗೆ ಪ್ರಮುಖ ಅಭಿವೃದ್ಧಿ ವಿಷಯಗಳ ಚರ್ಚೆ ನಡೆಯುವ ಸಾಧ್ಯತೆಯಿದೆ.

ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಎಲ್ಲಾ ಹಣಕಾಸು ಹಾಗೂ ಭದ್ರತೆ ಸಂಬಂಧಿಸಿದ ವಿಷಯಗಳು ಚರ್ಚೆಯಾಗುವ ನಿರೀಕ್ಷೆಯಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಗೆ ಗೈರುಹಾಜರಾಗಿದ್ದಾರೆ. ಈ ಹಿಂದೆ ಅವರು, ‘ಈ ಚಿಂತಕ ಚಾವಡಿಗೆ ಅಧಿಕಾರವಿಲ್ಲ, ಸಭೆಗಳು ಫಲಪ್ರದವಾಗುವುದಿಲ್ಲ’ ಎಂದಿದ್ದರು. ಈ ಕುರಿತು ಮೋದಿ ಅವರಿಗೆ ಪತ್ರ ಬರೆದಿರುವ ಮಮತಾ, ತಮ್ಮ ಗೈರು ಹಾಜರಿಯನ್ನು ಖಾತರಿಪಡಿಸಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಇದು ಮೊದಲನೇ ಸಭೆಯಾಗಿದೆ. ದಿನದಿಂದ ದಿನಕ್ಕೆ ಬಿಜೆಪಿಗೆ ಹತ್ತಿರವಾಗುತ್ತಿರುವ ಜಗನ್ , ಶುಕ್ರವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಕುರಿತು ಪ್ರಧಾನಿಯವರ ಮನವೊಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ರಾಷ್ಟ್ರೀಯ ದತ್ತಾಂಶಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಸಚಿವಾಲಯ (ಎನ್ ಎಸ್ ಎಸ್ ಒ) ನೀಡಿರುವ ವರದಿಯಲ್ಲಿ , ದೇಶದಲ್ಲಿ ನಿರುದ್ಯೋಗ ಕಳೆದ 45 ವರ್ಷಗಳಿಗಿಂತ ಹೆಚ್ಚಾಗಿದ್ದು, 2018-19ರ ನಾಲ್ಕನೇ ತ್ರೈ ಮಾಸಿಕದಲ್ಲಿ ಜಿಡಿಪಿ ದರ ಶೇ.5.8ರಷ್ಟು ಕುಸಿತ ಕಂಡಿರುವ ಎಂದು ಬಹಿರಂಗಗೊಂಡ ಬೆನ್ನಲ್ಲೇ ಈ ಸಭೆ ಕರೆಯಲಾಗಿದೆ.

5ನೇ ಪರಿಷತ್ತಿನ ಸಭೆಯಲ್ಲಿ ಮಳೆನೀರು ಕೊಯ್ಲು, ಬರ ಪರಿಸ್ಥಿತಿ ನಿರ್ವಹಣೆ ಹಾಗೂ ನಿವಾರಣೆ, ಅಪೇಕ್ಷಿತ ಜಿಲ್ಲಾ ಕಾರ್ಯಕ್ರಮಗಳು, ಕೃಷಿ ಪರಿವರ್ತನೆ , ಎಡಪಂಥೀಯ ತೀವ್ರಗಾಮಿಗಳು ಹೆಚ್ಚಾಗಿರುವ ಜಿಲ್ಲೆಗಳನ್ನು ಕೇಂದ್ರೀಕರಿಸಿ ಭದ್ರತಾ ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

ಸಭೆಯಲ್ಲಿ ವಿದೇಶಾಂಗ, ಗೃಹ, ಹಣಕಾಸು ಹಾಗೂ ಕೃಷಿ ಸಚಿವರು ಪಾಲ್ಗೊಂಡಿದ್ದಾರೆ.

Leave a Comment