ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಅನುಷ್ಟಾನಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ

ದಾವಣಗೆರೆ.ಜು.18; ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಯಶಸ್ವಿಯಾಗಲು ಅಧಿಕಾರಿಗಳ ಮಟ್ಟದಲ್ಲಿ ಸಮರ್ಪಕ ಅನುಷ್ಟಾನ ಬಹಳ ಮುಖ್ಯ ಎಂದು ಸಂಸತ್ತಿನಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಎನ್.ಡಿ.ಎ. ಸರ್ಕಾರ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಈ ಸಾಲಿನ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆ ಹಾಗೂ ಮತ್ತು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಯಶಸ್ವಿ ಅನುಷ್ಟಾನದ ಕುರಿತು ಸಂಸತ್ತಿನಲ್ಲಿ ಮಾತನಾಡಿದ ಸಂಸದರು ಸರ್ಕಾರ ಎಷ್ಟೇ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರಬಹುದು ಆದರೆ ಅದರ ಅನುಷ್ಟಾನದ ಸಂಪೂರ್ಣ ಜವಬ್ದಾರಿ ಅಧಿಕಾರಿ ವರ್ಗಕ್ಕೆ ಸೇರುತ್ತದೆ, ಅಧಿಕಾರಿಗಳ ಬೇಜವಬ್ದಾರಿತನ ಹಾಗೂ ರಾಜ್ಯ ಸರ್ಕಾರಗಳು ನೇಮಿಸಿಕೊಳ್ಳುವ ವಿಮಾ ಕಂಪನಿಗಳ ನಿರ್ಲಕ್ಷ್ಯೆತೆಯಿಂದಾಗಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ನಾನು ಪ್ರತಿನಿಧಿಸುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ನಕರಾತ್ಮಕ ಪರಿಣಾಮಗಳನ್ನು ಬೀರಿದೆ. ರೈತರು ವಿಮಾ ಯೋಜನೆಯಿಂದ ವಿಮುಖರಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 2016-17 ನೇ ಸಾಲಿನಲ್ಲಿ 31476 ರೈತರು ವಿಮೆ ಮಾಡಿಸಿದ್ದು, 17.80 ಕೋಟಿ ವಿಮೆ ಹಣ ಪಾವತಿ ಮಾಡಿದ್ದಾರೆ, 52 ಕೋಟಿ ವಿಮೆ ಹಣ ವಿತರಿಸಬೇಕಾದ ಜಾಗದಲ್ಲಿ 27557 ರೈತರಿಗೆ 48 ಕೋಟಿ ವಿಮೆ ಹಣವನ್ನು ವಿತರಣೆ ಮಾಡಲಾಗಿದೆ, ಬಾಕಿ ಉಳಿದಿರುವ 1140 ರೈತರಿಗೆ 4.15 ಕೋಟಿ ವಿಮೆ ಹಣ ಪಾವತಿಸಲು ವಿಮಾ ಕಂಪನಿಯವರು ಮೀನಮೇಷ ಮಾಡುತ್ತಿದಾರೆ. 2017-18 ನೇ ಸಾಲಿನಲ್ಲಿ 79711 ರೈತರು ವಿಮೆ ಮಾಡಿಸಿದ್ದು, 70.72 ಕೋಟಿ ವಿಮೆ ಹಣ ಪಾವತಿ ಮಾಡಿದ್ದಾರೆ, 12.20 ಕೋಟಿ ವಿಮೆ ಹಣ ಮಾತ್ರ ಮಂಜೂರಾಗಿದ್ದು, 11185 ರೈತರಿಗೆ 12.33 ಕೋಟಿ ವಿಮೆ ಹಣವನ್ನು ವಿತರಣೆ ಮಾಡಲಾಗಿದೆ, ಬಾಕಿ 68526 ಜನರು ಅಧಿಕಾರಿಗಳ ಬೇಜವಬ್ದಾರಿತನದ ವರದಿಗಳಿಂದಾಗಿ ವಿಮೆ ಪಡೆಯಲು ಅರ್ಹತೆಯನ್ನೇ ಹೊಂದಿರುವುದಿಲ್ಲ. 2018-19 ನೇ ಸಾಲಿನಲ್ಲಿ 12285 ರೈತರು ವಿಮೆ ಮಾಡಿಸಿದ್ದು, 10.70 ಕೋಟಿ ವಿಮೆ ಹಣ ಪಾವತಿ ಮಾಡಿದ್ದಾರೆ, ಇಲ್ಲಿಯವರೆಗೆ ಈ ರೈತರಿಗೆ ವಿಮೆ ಹಣ ಮಂಜೂರಾಗಿರುವುದಿಲ್ಲ. 2019-20 ನೇ ಸಾಲಿನಲ್ಲಿ ಕೇವಲ 4850 ರೈತರು ಮಾತ್ರ ಫಸಲ್ ಬಿಮಾ ಯೋಜನೆಯಡಿ ನೊಂದಣ ಮಾಡಿಸಿದ್ದಾರೆ, ಅಧಿಕಾರಿಗಳು ಹಾಗೂ ವಿಮಾ ಕಂಪನಿಗಳು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸದೇ ಇರುವ ಕಾರಣ ಈ ಸಾಲಿನಲ್ಲಿ ರೈತರ ನೊಂದಣಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಗ್ರಾಮಪಂಚಾಯತಿ ವಾರು ಬೆಳೆ ನಷ್ಟ ವರದಿ ತಯಾರಿಸುವಾಗ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸರ್ವೆ ಕಾರ್ಯ ನಡೆಸುವುದಿಲ್ಲ, ಹೊಲದಲ್ಲಿ ಮೆಕ್ಕೆಜೋಳದ ಬೆಳೆಯಿದ್ದರೆ ಅಪ್‍ಲೋಡ್ ಮಾಡುವಾಗ ಭತ್ತ ಎಂದು ವರದಿ ನೀಡುತ್ತಾರೆ, ಇಂತಹ ಲೋಪದೋಷಗಳಿಂದ ಅರ್ಹತೆ ಇದ್ದರೂ ರೈತರು ವಿಮೆ ಹಣ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಇನ್ನು ಖಾಸಗಿ ವಿಮಾ ಕಂಪನಿಗಳು ಬೆಳೆ ವಿಮೆಯ ವಿಷಯದಲ್ಲಿ ಸಮರ್ಪಕವಾಗಿ ಕೆಲಸ ಮಾಡದೇ ಇರುವುದರಿಂದ ರೈತರು ತೊಂದರೆ ಆನುಭವಿಸುತ್ತಿದ್ದಾರೆ. ಇನ್ನು ಮುಂದಾದರು ಖಾಸಗಿ ವಿಮಾ ಕಂಪನಿಗಳ ಬದಲಾಗಿ ಸರ್ಕಾರಿ ವಿಮಾ ಕಂಪನಿಗಳನ್ನು ಏಜೆನ್ಸಿಗಳನ್ನಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ವ್ಯಾಪಕ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾವುಗಳು ರಾಜ್ಯ ಸರ್ಕಾರಗಳಿಗೆ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಸಮರ್ಪಕ ಅನುಷ್ಟಾನದ ವಿಷಯದಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಕಳೆದ ಮೂರು ವರ್ಷಗಳಲ್ಲಿ ಬಾಕಿ ಇರುವ ವಿಮೆ ಹಣವನ್ನು ಶೀಘ್ರವಾಗಿ ರೈತರ ಖಾತೆಗೆ ಜಮಾ ಮಾಡಲು ಅಗತ್ಯ ಕ್ರಮಕೈಗೊಳ್ಳುವ ಮೂಲಕ ರೈತರ ಹಿತಕಾಯುವಂತೆ ಮನವಿ ಮಾಡಿದ್ದಾರೆ.

Leave a Comment