ಪ್ರಥಮ ಟೆಸ್ಟ್‌: ಜಾಮಿಸನ್‌ ಮಾರಕ ದಾಳಿಗೆ ಭಾರತ ತತ್ತರ

ವೆಲ್ಲಿಂಗ್ಟನ್‌, ಫೆ 21- ಮಳೆಯ ನಡುವೆಯೂ ಯುವ ವೇಗಿ ಕೈಲ್‌ ಜಾಮಿಸನ್‌ (38 ಕ್ಕೆ 3) ಅವರ ಮಾರಕ ದಾಳಿಗೆ ನಲುಗಿದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಆರಂಭಿಕ ದಿನ ಬಹು ದೊಡ್ಡ ಅಘಾತ ಅನುಭವಿಸಿತು.

ಇಲ್ಲಿನ ಬೇಸಿನ್‌ ರಿವರ್‌ ಅಂಗಳದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ, ಟೀ ವಿರಾಮದ ವೇಳೆಗೆ ಪ್ರಥಮ ಇನಿಂಗ್ಸ್‌ನಲ್ಲಿ 55 ಓವರ್‌ಗಳಿಗೆ 122 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ, ಮಳೆ ಬಂದ ಕಾರಣ ತೀರ್ಪುಗಾರರು ಮೊದಲನೇ ದಿನದ ಆಟವನ್ನು ನಿಲ್ಲಿಸಿದರು. ಇದರಿಂದಾಗಿ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಕೊಹ್ಲಿ ಪಡೆಗೆ ಕೊಂಚ ನೆಮ್ಮದಿ ತಂದಿತು. ಒಟ್ಟಾರೆ, ಮಳೆಯಿಂದಾಗಿ ಆರಂಭಿಕ ದಿನ 35 ಓವರ್‌ಗಳನ್ನು ಕಳೆದುಕೊಂಡಿತು.

test-india1

ಅವಕಾಶ ಕೈಚೆಲ್ಲಿಕೊಂಡ ಪೃಥ್ವಿ ಶಾ:
ರೋಹಿತ್‌ ಶರ್ಮಾ ಅನುಪಸ್ಥಿಯಲ್ಲಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರ ಜತೆ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದ ಪೃಥ್ವಿ ಶಾ ವಿಫಲರಾದರು. 18 ಎಸೆತಗಳಿಗೆ ಎರಡು ಬೌಂಡರಿ ಸಹಿತ 16 ರನ್‌ ಗಳಿಸಿ ಕ್ರೀಸ್‌ನಲ್ಲಿ ಗಟ್ಟಿ ತಳವೂರಿದ್ದರು. ಆದರೆ, ಐದನೇ ಓವರ್‌ನಲ್ಲಿ ಟಿಮ್‌ ಸೌಥಿ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀನ್‌ ಬೌಲ್ಡ್ ಆದರು. ಆ ಮೂಲಕ ಬಹುಬೇಗ ಆರಂಭಿಕ ಜೋಡಿ ಬೇರ್ಪಟ್ಟಿತು.

ಮೊದಲನೇ ವಿಕೆಟ್‌ಗೆ ಬೇಗ ಉರುಳುತ್ತಿದ್ದಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಟೆಸ್ಟ್‌ ವಿಶೇಷ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಕೂಡ ನಿರೀಕ್ಷೆ ಹುಸಿಗೊಳಿಸಿದರು. 42 ಎಸೆತಗಳಲ್ಲಿ ಕೇವಲ 11 ರನ್‌ ಗಳಿಸಿ ಕೈಲ್‌ ಜಾಮಿಸನ್‌ ಅವರ ಚೊಚ್ಚಲ ವಿಕೆಟ್‌ಗೆ ಬಲಿಯಾದರು. ನಂತರ, ಬಂದ ನಾಯಕ ನಾಯಕ ವಿರಾಟ್‌ ಕೊಹ್ಲಿ(2) ಕೂಡ ಕೈಲ್‌ ಜಾಮಿಸನ್‌ ಅವರ ಎಸೆತದಲ್ಲಿ ರಾಸ್‌ ಟೇಲರ್‌ಗೆ ಕ್ಯಾಚ್‌ ನೀಡಿ ಬಹುಬೇಗ ನಿರ್ಗಮಿಸಿದರು.

ಮಿಂಚಿ ಮರೆಯಾದ ಮಯಾಂಕ್‌ ಅಗರ್ವಾಲ್:
ಸಾಗರೋತ್ತರ ಟೆಸ್ಟ್ ಸರಣಿಗಳಲ್ಲಿ ಟೀಮ್‌ ಇಂಡಿಯಾದಲ್ಲಿ ಭರವಸೆ ಮೂಡಿಸಿರುವ ಕನ್ನಡಿಗ ಮಯಾಂಕ್‌ ಅಗರ್ವಾಲ್, ಆರಂಭದಿಂದಲೂ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್‌ ಮಾಡುತ್ತಿದ್ದರು. ಬಹುಬೇಗ ತಂಡ ಮೂರು ವಿಕೆಟ್‌ ಕಳೆದುಕೊಂಡರು ನ್ಯೂಜಿಲೆಂಡ್‌ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 84 ಎಸೆಗಳಲ್ಲಿ ಐದು ಬೌಂಡರಿ ಸಹಿತ 34 ರನ್‌ ಗಳಿಸಿ ದೊಡ್ಡ ಇನಿಂಗ್ಸ್‌ ಕಟ್ಟುವ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ಟ್ರೆಂಟ್‌ ಬೌಲ್ಟ್‌ ಪೆವಿಲಿಯನ್‌ ದಾರಿ ತೋರಿಸಿದರು. ಮಯಾಂಕ್, ಉಪ ನಾಯಕ ಅಜಿಂಕ್ಯಾ ರಹಾನೆ ಅವರೊಂದಿಗೆ ಮುರಿಯದ ನಾಲ್ಕನೇ ವಿಕೆಟ್‌ಗೆ 48 ರನ್‌ ಕಲೆಹಾಕಿ ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಕೊಂಚ ಪ್ರಯತ್ನ ನಡೆಸಿದರು.ಕಳೆದ ಅಭ್ಯಾಸ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಹನುಮ ವಿಹಾರಿ, ತಂಡ ಇಟ್ಟಿದ್ದ ನಿರೀಕ್ಷೆಯನ್ನು ಹುಸಿ ಮಾಡಿದರು. ಕೇವಲ ಏಳು ರನ್‌ ಗಳಿಸಿ ಕೈಲ್‌ ಜಾಮಿಸನ್‌ಗಿ ವಿಕೆಟ್‌ ಒಪ್ಪಿಸಿದರು.
ಭಾರತಕ್ಕೆ ರಹಾನೆ-ಪಂತ್‌ ಆಸರೆ:
ತಂಡದ ಮೊತ್ತ 101 ರನ್‌ಗಳಿಗೆ ಪ್ರಮುಖ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಜತೆಯಾದ ಅಜಿಂಕ್ಯಾ ರಹಾನೆ ಜೋಡಿ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿತು. ಈ ಜೋಡಿ ಸುಮಾರು 14ಕ್ಕೂ ಹೆಚ್ಚು ಓವರ್‌ಗಳವರೆಗೂ ಕಿವೀಸ್‌ ಮಾರಕ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಯಿತು. ಮೊದಲನೇ ದಿನ ಚೆಂಡಿನ ಚಲನೆ ಹಾಗೂ ಸ್ವಿಂಗ್‌ ಅನ್ನು ಅರಿಯುವುದು ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸವಾಲಿನ ಕೆಲಸವಾಗಿತ್ತು. ಈ ಹಾದಿಯಲ್ಲಿ ಪಂತ್ ಹಾಗೂ ರಹಾನೆ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್‌ ಮಾಡಿದರು. ಈ ಜೋಡಿ ಮುರಿಯದ ಆರನೇ ವಿಕೆಟ್‌ಗೆ 21 ರನ್‌ ಕಲೆಹಾಕಿ ಭರವಸೆ ಮೂಡಿಸಿದ್ದು, ನಾಳೆಗೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.
ಮೊದಲನೇ ಟೆಸ್ಟ್‌ ಪಂದ್ಯದ ನಿಮಿತ್ತ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಉಪ ನಾಯಕ ಅಜಿಂಕ್ಯಾ ರಹಾನೆ, ಕಿವೀಸ್‌ ನೆಲದಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ 320 ರಿಂದ 330 ರನ್ ಗಳಿಸಿದರೆ, ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಗುತ್ತದೆ ಎಂದು ಹೇಳಿದ್ದರು. ಆದರೆ, ಅದರಂತೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಭಾರತ ಮೊದಲನೇ ದಿನವೇ ಐದು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆದರೆ, ತಾವು ಕೊಟ್ಟ ಮಾತಿನಂತೆ ಉಪ ನಾಯಕ, ತಂಡದ ಮೊತ್ತ 300ರ ಗಡಿ ದಾಟಿಸಲು ಪಣ ತೊಟ್ಟಿದ್ದಾರೆ. ಕ್ರೀಸ್‌ನಲ್ಲಿ ಕಿವೀಸ್‌ ಮಾರಕ ದಾಳಿಯನ್ನು ಮೊದಲನೇ ದಿನ ಸಮರ್ಥವಾಗಿ ಮೆಟ್ಟಿ ನಿಂತಿದ್ದಾರೆ. 122 ಎಸೆತಗಳಲ್ಲಿ ನಾಲ್ಕು ಬೌಂಡರಿ ಸಹಿತ 38 ರನ್ ಗಳಿಸಿ ವಿಕೆಟ್‌ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ರಿಷಭ್‌ ಪಂತ್ (10) ಇದ್ದಾರೆ.
ಚೊಚ್ಚಲ ಪಂದ್ಯದಲ್ಲಿಯೇ ಜಾಮಿಸನ್‌ ಮಿಂಚು:
ಸೀಮಿತ ಓವರ್‌ಗಳ ಮಾದರಿಯಲ್ಲಿ ನ್ಯೂಜಿಲೆಂಡ್‌ ಪರ ಮಿಂಚಿನ ದಾಳಿ ನಡೆಸಿ ಎಲ್ಲರ ಗಮನ ಸೆಳೆದಿದ್ದ ಕೈಲ್‌ ಜಾಮಿಸನ್‌ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯದಲ್ಲೂ ಎಲ್ಲರ ಚಿತ್ತ ತಮ್ಮತ್ತ ಸೆಳೆದರು. ಒಟ್ಟು 14 ಓವರ್‌ ಬೌಲಿಂಗ್‌ ಮಾಡಿದ ಜಾಮಿಸನ್‌ ಎರಡು ಮೆಡಿನ್‌ ಜತೆ 38 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ ಕಬಳಿಸಿ ಭಾರತದ ಕುಸಿತಕ್ಕೆ ಕಾರಣರಾದರು. ಚೇತೇಶ್ವರ ಪೂಜಾರ, ವಿರಾಟ್‌ ಕೊಹ್ಲಿ ಹಾಗೂ ಹನುಮ ವಿಹಾರಿ ವಿಕೆಟ್‌ ಪಡೆದಿದ್ದು ವಿಶೇಷವಾಗಿತ್ತು.

ಸಂಕ್ಷಿಪ್ತ ಸ್ಕೋರ್‌

ಭಾರತ
ಪ್ರಥಮ ಇನಿಂಗ್ಸ್‌: 55 ಓವರ್‌ಗಳಿಗೆ 122/5 (ಅಜಿಂಕ್ಯಾ ರಹಾನೆ ಔಟಾಗದೆ 38, ಮಯಾಂಕ್‌ ಅಗರ್ವಾಲ್‌ 34, ಪೃಥ್ವಿ ಶಾ 16; ಕೈಲ್ ಜಾಮಿಸನ್‌ 38 ಕ್ಕೆ 3, ಟಿಮ್‌ ಸೌಥಿ 27 ಕ್ಕೆ 1, ಟ್ರೆಂಟ್‌ ಬೌಲ್ಟ್‌ 44 ಕ್ಕೆ 1)

Leave a Comment