ಪ್ರತ್ಯೇಕ ಧರ್ಮ:ನಾಳೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ-ಸಿಎಂ

ರಾಣೆಬೆನ್ನೂರ, ಮಾ 13- ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ ವಿಚಾರದಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್‌ರವರು ನೀಡಿರುವ ವರದಿ ಕುರಿತಂತೆ ಕಳೆ ಸಭೆಯಲ್ಲಿ ನಡೆದ ಚರ್ಚೆ ಅಪೂರ್ಣವಾಗಿದ್ದು, ನಾಳಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅಸುಂಡಿ ಕೆರೆಯ ಭೂಮಿ ಪೂಜೆಗೆ ತೆರಳುವ ಮುನ್ನ ಇಲ್ಲಿ ಹೂಲಿಹಳ್ಳಿ ಹೆಲಿಪ್ಯಾಡ್‌ನಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿಎಂ ನಾಟಕ ಮಾಡುತ್ತಿದ್ದಾರೆ ಎಂಬ ಬಿಜೆಪಿ ಧುರೀಣ ವಿಜಯ ಸಂಕೇಶ್ವರರ ಹೇಳಿಕೆ ಆಧಾರ ರಹಿತವಾದದ್ದು ಹಾಗೂ ಬೇಜವಾಬ್ದಾರಿತನದ್ದು ಎಂದು ಅವರು ಖಂಡಿಸಿದರು.
ಕೇಂದ್ರ ಮೆಕ್ಕೆಜೋಳ ಖರೀದಿ ಮಾಡುವುದಿಲ್ಲವೆಂದು ಈಗಾಗಲೇ ಹೇಳಿದೆ ಹೀಗಾಗಿ ನಾವು ಮಕ್ಕೆಜೋಳ ಖರೀದಿ ಮಾಡುತ್ತಿಲ್ಲ ಎಂದ ಅವರು, ಮೆಕ್ಕೆಜೋಳ ಖರೀದಿ ವಿಷಯದ ಕುರಿತು ರೈತರು ಸಂಸದರನ್ನೇ ಕೇಳಬೇಕು ಎಂದು ನುಡಿದರು.
ಪೊಲೀಸ ಸಿಬ್ಬಂದಿ ವೇತನ ಪರಿಷ್ಕರಣೆ ಕುರಿತಂತೆ 6ನೇ ವೇತನ ಆಯೋಗ ರಚಿಸಲಾಗಿದ್ದು, ಈ ಕುರಿತಂತೆ ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಾ

. ಶಾಂತ ಪಿ. ಅವರಿಂದ ಅನಧಿಕೃತ ಗರ್ಭಕೋಶ ಚಿಕಿತ್ಸೆಗೆ ಒಳಗಾದವರಿಗೆ ತ್ವರಿತವಾಗಿ ಪರಿಹಾರ ನೀಡಿಕೆಗೆ ಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ವಿಧಾನಸಭಾಧ್ಯಕ್ಷರಾದ ಕೆ.ಬಿ. ಕೋಳಿವಾಡ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಬಿ.ಸಿ ಪಾಟೀಲ, ಅಜ್ಜಂಪೀರ ಖಾದ್ರಿ, ಜಿಲ್ಲಾಧಿಕಾರಿ ಡಾ. ವೆಂಕಟೇಶ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment