ಪ್ರತ್ಯೇಕ ಅಪಘಾತ ನಾಲ್ವರ ಸಾವು : 30 ಮಂದಿಗೆ ಗಾಯ

ಬಳ್ಳಾರಿ, ಏ.೨೫- ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸಾರಿಗೆ ಸಂಸ್ಥೆ ಬಸ್ ಗಳಿಂದಾಗಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಕೂಲಿ‌ ಕಾರ್ಮಿಕರು ‌ಸಾವು.

ತಾಲೂಕಿನ ಹಾರುವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 53 ರಲ್ಲಿ ಇಂದು ಬೆಳಿಗ್ಗೆ ಬಸ್ ಮತ್ತು ಟ್ರಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ಇಬ್ಬರು ನರೇಗಾ‌ ಕೂಲಿ ಕಾರ್ಮಿಕರು ಮೃತಪಟ್ಟಿದ್ದು 30 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ.

ದುರ್ಘಟನೆಯಲ್ಲಿ ಚಿಲಕನಹಟ್ಟಿ ಗ್ರಾಮದ ರೇಣುಕಾಮ್ಮ (40), ಯರಿಸ್ವಾಮಿ(35) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಗಾಯಗೊಂಡ 15 ಕ್ಕೂ ಹೆಚ್ಚು ಜನರನ್ನು ಹೊಸಪೇಟೆ ಸರಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು ಗಂಭೀರವಾಗಿ ಗಾಯಗೊಂಡ 17 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ‌ದಾಖಲಿಸಲಾಗಿದೆ.

ಬೆಳಗಿನ ಜಾವ ಚಿಲಕನಹಟ್ಟಿ ಗ್ರಾಮದ 30 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಚಿಲಕನಹಟ್ಟಿ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಹಾರುವನಹಳ್ಳಿ ಕೋಳಿ ಫಾರಂ ಬಳಿ ಕೈಗೊಂಡಿರುವ ಬಸವನದುರ್ಗ ಕೆರೆ ಹೂಳೆತ್ತುವ ಕಾಮಗಾರಿಗೆ ಕೂಲಿ ಕೆಲಸಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಗಂಗಾವತಿಗೆ ಹೊರಟಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡ ಚಿಲಕನಹಟ್ಟಿ ಗ್ರಾಮದ ರತ್ನಮ್ಮ(45), ಶಾಂತಮ್ಮ(30), ರವಿ(20), ಹುಲಿಗೆಮ್ಮ(50), ಮಹೇಶ್(19), ಸೋಮಕ್ಕ(52), ಭಾಗ್ಯಮ್ಮ(45), ವಿ. ಸೋಮಕ್ಕ(55) ಸೇರಿದಂತೆ 16 ಜನರನ್ನು ಹೊಸಪೇಟೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು. ಗಂಭೀರವಾಗಿ ಗಾಯಗೊಂಡ 15 ಜನರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ‌.

ಸ್ಥಳಕ್ಕೆ ತಾಲೂಕು ಪಂಚಾಯಿತಿ ಇಒ ಕೃಷ್ಣಮೂರ್ತಿ, ಗ್ರಾಮೀಣ ಉದ್ಯೋಗ ಸಹಾಯಕ ನಿದೇರ್ಶಕ ಶ್ರೀಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಹೊಸಪೇಟೆ ಸಹಾಯಕ‌ ಉಪವಿಭಾಗಾಧಿಕಾರಿ ಲೋಕೇಶ್ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ಅಪಘಾತದ ಸ್ಥಳಕ್ಕೆ ಪೊಲೀಸ್ ಇಲಾಖೆಯ ಡಿವೈಎಸ್ಪಿ ಬಸವೇಶ್ವರ ಈರಾ ಹಾಗೂ ಸಿಪಿಐ ಕುಮಾರ ಕೆ. ಭೇಟಿ ನೀಡಿ ಮುಂದಿನ‌ಕ್ರಮ ತೆಗೆದುಕೊಂಡಿದ್ದಾರೆ.

ಸಂಡೂರು ಸಮೀಪ ಅಪಘಾತ
ಮತ್ತೊಂದು ಪ್ರಕರಣದಲ್ಲಿ ಕೂಡ್ಲಿಗಿಯಿಂದ ಸಂಡೂರು ಕಡೆ ಬರುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಕೆ.ಎ.35 ಎಫ್.285 ನಂಬರಿನ ಬಸ್ ಗಂಡಿ ನರಸಿಂಹ ದೇವಸ್ಥಾನ ಬಳಿ ಬರುವಾಗ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಕೆ.ಎ-35 ವಿ.1632 ಸಂಖ್ಯೆಯ ಬೈಕ್ ಗೆ ಡಿಕ್ಕಿ ಹೊಡೆದು ನಂತರ ಮರ, ಅಲ್ಲದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಎಸ್.ಕೆ.ಎಂ.ಇ ಗಣಿ ಅದಿರು ಸ್ಟಾಕನ್ ಪ್ಲಾಟ್ ಗೆ ಬಂದು ನಿಂತಿದೆ. ಬಸ್ ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Leave a Comment