ಪ್ರತಿಭೆ ಗುರುತಿಸುವಲ್ಲಿ ಪ್ರತಿಭಾಪುರಸ್ಕಾರ ಸಹಕಾರಿ

ದಾವಣಗೆರೆ.ಜು.14; ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ಪ್ರತಿಭಾ ಪುರಸ್ಕಾರ ಸಹಕಾರಿ ಎಂದು ಶ್ರೀ ದೇವಾಂಗ ಹಾಸ್ಟೆಲ್ ಸಂಘದ ಅಧ್ಯಕ್ಷ ಡಾ.ಎಂ.ಟಿ.ದೇವೇಂದ್ರಪ್ಪ ಹೇಳಿದರು. ನಗರದ ರೋಟರಿ ಬಾಲಭವನದಲ್ಲಿ ದೇವಾಂಗ ಸಂಘದಿಂದ ಆಯೋಜಿಸಿದ್ದ ದೇವಾಂಗ ವಿದ್ಯಾರ್ಥಿಗಳಿಗೆ 2 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ನೇಕಾರ ವಧು-ವರರ ಸಮಾವೇಶದಲ್ಲಿ ಮಾತನಾಡಿದ ಅವರು ಮಕ್ಕಳ ಪ್ರತಿಭೆ ಗುರುತಿಸಿದಾಗ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಿದಂತಾಗುತ್ತದೆ. ಪ್ರತಿಭಾ ಪುರಸ್ಕಾರ ಪ್ರತಿಯೊಂದು ಜನಾಂಗದಲ್ಲೂ ನಡೆಯುತ್ತದೆ. ಇದೊಂದು ಪ್ರೋತ್ಸಾಹದ ಕಾರ್ಯಕ್ರಮವಾಗಿದೆ.ದೇವಾಂಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗಿದೆ. ಯಾವುದೇ ರೀತಿಯ ತೊಂದರೆಗಳಾದರೆ ಸಹಾಯ ನೀಡಲು ಸದಾಸಿದ್ದರಿದ್ದೇವೆ. ಸಮಾಜದ ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯದಂತಹ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಮುಂದೆ ಬರಬೇಕು. ವಿದ್ಯೆಯ ಜೊತೆಗೆ ಜೀವನದಲ್ಲಿ ಮೌಲ್ಯಗಳನ್ನು ಕಲಿಯಬೇಕು. ಹೆಚ್ಚು ಓದಿದವರು ಬುದ್ದಿವಂತರೇ ಆದರೆ ಅಂತವರೆ ಮೋಸ ಮಾಡುವುದರಲ್ಲಿ ಮುಂದಿದ್ದಾರೆ. ಆದ್ದರಿಂದ ಪೋಷಕರು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಆಚಾರ ವಿಚಾರ ಮೌಲ್ಯ ತಿಳಿಸಬೇಕೆಂದರು. ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಡಾ.ಎಸ್ ರಂಗನಾಥ್ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಸಮಾಜ ಬಾಂಧವರು ಹೆಚ್ಚಿನ ಉನ್ನತಸ್ಥಾನ ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಾಜದ ವಿದ್ಯಾರ್ಥಿಗಳು ಹಿಂದಿದ್ದಾರೆ ಆದ್ದರಿಂದ ಈ ಬಗ್ಗೆ ಗಮನ ಹರಿಸಲಾಗುವುದು.ಹಿಂದುಳಿದ ವರ್ಗಗಳ ಇಲಾಖೆಯಿಂದ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ 1000 ಹಾಗೂ ಪಿಯುಸಿಯ 500 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿದೇಶಗಳಲ್ಲಿ ಅತ್ಯುತ್ತಮ ವಿವಿಗಳಲ್ಲಿ ಓದುವ ಅವಕಾಶವಿದೆ ಆದ್ದರಿಂದ ಸಮಾಜದ ವಿದ್ಯಾರ್ಥಿಗಳು ಇದರ ಬಗ್ಗೆ ಗಮನಹರಿಸಬೇಕಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಮಾಡಬೇಕಿದೆ ಎಂದರು. ಮುದನೂರು ಶ್ರೀ ಶರಣ ಶಿವಲಿಂಗೇಶ್ವರ ಮಠದ ಶ್ರೀ ಡಾ. ಈಶ್ವರಾನಂದ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಈ ವೇಳೆ ಜಿ.ರಮೇಶ್, ಜಿ.ಆರ್.ಕುಮಾರ್ ಮತ್ತಿತರರಿದ್ದರು.

Leave a Comment