ಪ್ರತಿಭಟನೆ ಕೈಬಿಡಲು ರೈತರಿಗೆ ಸಿಎಂ ಮನವಿ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ನ. ೧೬- ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ರೈತರ ಸರ್ಕಾರ. ರೈತರ ವಿಚಾರದಲ್ಲಿ ಪ್ರತಿಷ್ಠೆಯ ಪ್ರಶ್ನೆಯೇ ಇಲ್ಲ. ರೈತರ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ಸಿದ್ದರಿದ್ದೇವೆ. ಹಾಗಾಗಿ ಕಬ್ಬು ಬೆಳೆಗಾರರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸದಿದ್ದರೆ ಬೆಳಗಾವಿ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳುವವರು ರೈತ ವಿರೋಧಿಗಳು. ಇದು ರೈತ ವಿರೋಧಿ ಹೇಳಿಕೆಯಾಗಿದೆ ಎಂದು ಹೇಳಿದರು.

ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ವಿಧಾನಸೌಧದ ಬಾಗಿಲು ಮುಕ್ತವಾಗಿದೆ. ನಾನೇನು ದಿಗ್ಬಂಧನ ಹಾಕಿಲ್ಲ. ರೈತರು ಬಂದು ತಮ್ಮ ಸಮಸ್ಯೆಗಳನ್ನು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬಹುದು. ಅದು ಬಿಟ್ಟು ಪ್ರತಿಭಟನೆ ಮಾಡುವುದು ಸರಿಯಾದುದಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದ ಮುಂಭಾಗದಲ್ಲಿಂದು ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದಿರುವ ರೈತರ ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸೋಮವಾರ ವಿಧಾನಸೌಧಕ್ಕೆ ರೈತರನ್ನು ಕರೆಸಿ ಚರ್ಚೆ ಮಾಡುತ್ತೇನೆ ಎಂದರು.

ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಹಣ ಕೊಡಿಸುವ ನಿಟ್ಟಿನಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಈಗಾಗಲೇ ಚರ್ಚೆ ಮಾಡಿದ್ದಾರೆ. ಚರ್ಚೆ ಸಂದರ್ಭದಲ್ಲಿ ಸಮಸ್ಯೆ ಪರಿಹಾರವಾಯಿತು ಎಂದು ಸಿಹಿ ತಿಂದ ರೈತ ಮುಖಂಡರು ನಂತರ ಪ್ರತಿಭಟನೆಗಿಳಿದಿರುವುದು ಅರ್ಥವಾಗುತ್ತಿಲ್ಲ. ಇದು ರೈತರ ಸರ್ಕಾರ. ಸಮಸ್ಯೆಗಳ ಬಗ್ಗೆ ಚರ್ಚಿಸಿದರೆ ಎಲ್ಲದಕ್ಕೂ ಪರಿಹಾರ ಇದೆ. ಅದು ಬಿಟ್ಟು ಸರ್ಕಾರಕ್ಕೆ ಗಡುವು ನೀಡುವ ಕೆಲಸ ರೈತ ವಿರೋಧಿ. ರೈತರ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಸೇಡಿನ ರಾಜಕಾರಣ ಇಲ್ಲ

ಮಾಜಿ ಸಚಿವ ಜನಾರ್ಧನರೆಡ್ಡಿಯವರ ಆರೋಪಗಳಿಗೆ ಉತ್ತರ ನೀಡುವುದು ಮುಖ್ಯಮಂತ್ರಿ ಸ್ಥಾನದ ಘನತೆಗೆ ಅವಮಾನ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಾಜಿ ಸಚಿವ ಜನಾರ್ಧನರೆಡ್ಡಿ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದೇನೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಾನು ಯಾರ ಮೇಲೂ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ಸೇಡು ತೀರಿಸಿಕೊಳ್ಳಬೇಕೆಂದಿದ್ದರೆ 2006ರಲ್ಲೆ ತೀರಿಸಿಕೊಳ್ಳುತ್ತಿದ್ದೆ. ಅಬಿಡೆಂಟ್ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ನಾವ್ಯಾರು ಹಸ್ತಕ್ಷೇಪ ಮಾಡುತ್ತಿಲ್ಲ. ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಕಾನೂನಿನಂತೆ ತನಿಖೆ ನಡೆಸಿದ್ದಾರೆ ಎಂದರು.

ಮಾಜಿ ಸಚಿವ ಜನಾರ್ಧನರೆಡ್ಡಿ ಅವರು ಹೇಳಿರುವ ಪುಣ್ಯಕೋಟಿ ಕಥೆ ನನಗೆ ಗೊತ್ತಿಲ್ಲ. ಈ ಹಿಂದೆ ಅವರನ್ನು ಬಂಧಿಸಲು ಒಂದು ಸಾವಿರ ಪೊಲೀಸರನ್ನು ಕಳುಹಿಸಿದ್ದೆ ಎಂಬ ಹೇಳಿಕೆಯೂ ಅರ್ಥವಿಲ್ಲದ್ದು. ಅವರ ಮಾತಿಗೆ ಪ್ರತಿಕ್ರಿಯಿಸುವುದು ಮುಖ್ಯಮಂತ್ರಿ ಸ್ಥಾನಕ್ಕೆ ಅವಮಾನ ಎಂದು ಹೇಳಿದರು.

Leave a Comment