ಪ್ರತಿಭಟನೆಯ ಎತ್ತು ಪರಾರಿ

ನಗೆಪಾಟಲಿಗೀಡಾದ ಕೈ ಮುಖಂಡ
ಮಂಗಳೂರು, ಸೆ.೧೧- ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ನಿನ್ನೆ ಕರೆ ನೀಡಿದ್ದ ಭಾರತ್ ಬಂದ್ ವೇಳೆ ಪ್ರಚಾರಕ್ಕಾಗಿ ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಇಳಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ನಗೆಪಾಟಲಿಗೀಡಾದ ಘಟನೆ ನಗರದಲ್ಲಿ ನಡೆದಿದೆ. ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಅವರ ಆಪ್ತರು ಎತ್ತಿನಗಾಡಿಯೊಂದನ್ನು ಸಿದ್ಧಪಡಿಸಿದ್ದರು.
ಎತ್ತಿನ ಗಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಗಳು, ಗಾಡಿಯ ಸುತ್ತ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರ ಫೋಟೋ ಎಲ್ಲವನ್ನೂ ಅಂಟಿಸಿ ಶೃಂಗಾರ ಮಾಡಲಾಗಿತ್ತು. ಹಂಪನಕಟ್ಟೆಗೆ ಶೃಂಗಾರಗೊಂಡು ಬಂದ ಎತ್ತಿನ ಗಾಡಿಯಲ್ಲಿ ಐವನ್ ಡಿಸೋಜಾ ಮೆರವಣಿಗೆಯಲ್ಲಿ ತೆರಳುವುದು ಎನ್ನುವ ಪ್ಲಾನ್ ಕೂಡಾ ರೆಡಿಯಾಗಿತ್ತು. ಆದರೆ ಎತ್ತಿನಗಾಡಿಗೆ ಕಟ್ಟಿದ ಎತ್ತುಗಳು ಮಾತ್ರ ಕಾಂಗ್ರೆಸ್ ಕಾರ್ಯಕರ್ತರ ಎಲ್ಲಾ ಪ್ಲಾನನ್ನೂ ಹಾಳು ಮಾಡಿವೆ. ಎತ್ತಿನಗಾಡಿಯನ್ನು ಏರಲು ಸಿದ್ಧವಾದ ಐವನ್ ಡಿಸೋಜಾರಿಗೆ ಎತ್ತುಗಳು ಗಾಡಿಯನ್ನು ಏರಲು ಅವಕಾಶವನ್ನೇ ನೀಡಿಲ್ಲ. ಗಾಡಿಯನ್ನು ಏರಲು ಯತ್ನ ನಡೆಸಿದ ಐವನ್ ಡಿಸೋಜಾ ಗಾಡಿಯಿಂದ ಬಿದ್ದು ನಗೆಪಾಟಲಿಗೀಡಾಗುವುದಾಗುವುದು ಗ್ಯಾರಂಟಿ ಎಂದು ತನ್ನ ಪ್ರಯತ್ನವನ್ನು ಅಲ್ಲಿಗೇ ಬಿಟ್ಟುಬಿಟ್ಟಿದ್ದಾರೆ. ಎತ್ತುಗಳು ಹಗ್ಗದಿಂದ ಬಿಡಿಸಿಕೊಂಡು ಇಷ್ಟ ಬಂದ ಕಡೆ ಓಡಿದ್ದು, ಗಾಡಿಯನ್ನು ಹಿಡಿಯಲು ಕಾರ್ಯಕರ್ತರೂ ಎತ್ತುಗಳ ಹಿಂದೆ ಓಡುವ ಮೂಲಕ ನಗೆಪಾಟಲಿಗೆ ತುತ್ತಾಗಿದ್ದಾರೆ. ಒಟ್ಟಾರೆ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ.

Leave a Comment