ಪ್ರತಿಪಕ್ಷದ ನಾಯಕನ ಆಯ್ಕೆ ಹೈಕಮಾಂಡ್‌ ನಿರ್ಧಾರ

ನವದೆಹಲಿ, ಸೆ. ೧೨- ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಸಂಬಂಧ ಇದುವರೆಗೂ ಯಾವುದೇ ಚರ್ಚೆಗಳು ನಡೆದಿಲ್ಲ, ಹೈಕಮಾಂಡ್ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರುಗಳು ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು. ಪಕ್ಷ ಯಾರನ್ನು ಆಯ್ಕೆ ಮಾಡುತ್ತದೋ ಅದಕ್ಕೆ ತಮ್ಮ ಬೆಂಬಲ-ಸಹಕಾರ ಇರಲಿದೆ ಎಂದು ಅವರು ಹೇಳಿದರು.

ಅನಗತ್ಯ ಕಿರುಕುಳ
ಗುಜರಾತ್ ಶಾಸಕರನ್ನು ರಕ್ಷಿಸಿದ್ದರೂ ಎನ್ನವ ಕಾರಣಕ್ಕಾಗಿ ಜಾರಿ ನಿರ್ದೇಶನಾಲಯ ಬಳಸಿಕೊಂಡು ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ತನಿಖೆ ನಡೆಸುವುದಕ್ಕೆ ನಮ್ಮದೇನು ವಿರೋಧವಿಲ್ಲ. ಆದರೆ ಅವರ ಬಂಧನವನ್ನು ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸುವ ಅಗತ್ಯವಿಲ್ಲ, ಅವರು ಅಪರಾಧಿಯಲ್ಲ, ಅಪರಾಧ ಸಾಬೀತು ಆಗುವವರೆಗೂ ಆರೋಪಿ ಅಮಾಯಕನಾಗಿರುತ್ತಾನೆ. ಡಿ.ಕೆ. ಶಿವಕುಮಾರ್ ತನಿಖೆ ಸಹಕಾರ ನೀಡುತ್ತಿದ್ದರೂ ಬಂಧಿಸಿಲಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ.
ಸಾಧ್ಯವಾದರೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

ಗಾಂಧಿ ಜಯಂತಿಗೆ ಸಿದ್ಧತೆ
ಮಹಾತ್ಮಗಾಂಧೀಜಿಯವರ 150ನೇ ವರ್ಷಾಚರಣೆ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಆಚರಿಸಲು ನಿರ್ಧರಿಸಿದೆ. ಹೀಗಾಗಿ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಎಲ್ಲಾ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಶಾಸಕ ಪಕ್ಷದ ಪಾಲ್ಗೊಂಡಿದ್ದಾರೆ ಎಂದರು.

ಇದೇ ವೇಳೆ ಪಕ್ಷ ಸಂಘಟನೆ ಕಾರ್ಯಕರ್ತರಿಗೆ ತರಬೇತಿ, ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಸೇರಿದಂತೆ ಹಲವು ಪಕ್ಷ ಸಂಘಟನೆಗೆ ಸೇರಿದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ರಾಹುಲ್ ಗೈರು
ಕಾಂಗ್ರೆಸ್‌ನ ವಿವಿಧ ರಾಜ್ಯಗಳ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಸಭೆಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗೈರು ಹಾಜರಾಗಿದ್ದರು.

Leave a Comment