ಪ್ರಜ್ವಲ್ ರೇವಣ್ಣಗೆ ಯುವಘಟಕ ಹೊಣೆ, ಉತ್ತರ ಕರ್ನಾಟಕದ ಉಸ್ತುವಾರಿ

ಬೆಂಗಳೂರು, ಜೂ 18 – ಯುವ ಸಮೂಹವನ್ನು ಸೆಳೆದು ಪಕ್ಷಕ್ಕೆ ಆಧುನಿಕ ಸ್ಪರ್ಶ ನೀಡಲು ಸಂಸದ ಪ್ರಜ್ವಲ್ ರೇವಣ್ಣ ಮುಂದಾಗಿದ್ದು, ಇದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.

ಜೆಡಿಎಸ್ ರೈತ ಪರ ಪಕ್ಷ ಎಂಬ ವರ್ಚಸನ್ನೂ ಮೀರಿ ಐಟಿಬಿಟಿ ವಲಯವನ್ನೂ ತಲುಪಬೇಕು ಎಂಬ ಮಹಾದಾಸೆ ಹೊಂದಿರುವ ಅವರು, ಇದಕ್ಕೆ ಸಾಮಾಜಿಕ ಜಾಲತಾಣ ಮಹತ್ವದ ವೇದಿಕೆ ಎನ್ನುವುದನ್ನು ಮನಗಂಡಿದ್ದಾರೆ. ಪ್ರಜ್ವಲ್ ರೇವಣ್ಣ ಇದೀಗ ಎಲ್ಲಾ ವಯೋಮಾನದವರನ್ನು ಅದರಲ್ಲಿಯೂ ಪ್ರಮುಖವಾಗಿ ಯುವ ಸಮೂಹವನ್ನು ಪಕ್ಷದತ್ತ ಆಕರ್ಷಿಸಲು ಸೂಕ್ತ ಕಾರ್ಯತಂತ್ರ ಹಣೆಯುವಲ್ಲಿ ನಿರತರಾಗಿದ್ದಾರೆ. ಪಕ್ಷದ ಉನ್ನತ ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ಅವರಿಗೆ ಜೆಡಿಎಸ್ ಯುವ ಘಟಕದ ಹೊಣೆ ವಹಿಸುವ ಸಾಧ್ಯತೆ ದಟ್ಟವಾಗಿದ್ದು, ಹಾಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಅವರಿಂದ ಪಕ್ಷದ ಹೊಣೆಗಾರಿಕೆ ವಹಿಸಿಕೊಂಡ ಬಳಿಕ ಪಕ್ಷಕ್ಕೆ ಹೊಸ ಹುರುಪು ಹಾಗೂ ಹೊಳಪು ನೀಡಲು ಉದ್ದೇಶಿಸಿದ್ದಾರೆ.
ಈಗಾಗಲೇ ಪಕ್ಷ ಸಂಘಟನೆಯಲ್ಲಿ ತಮ್ಮ ‘ಜೆಡಿಎಸ್ ಯುವ ಬ್ರಿಗೇಡ್’ ಅನ್ನು ಪರೋಕ್ಷವಾಗಿ ಬಳಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ, ಇದೀಗ ದೇವೇಗೌಡರ ಸಾಧನೆಗಳು, ಚಿಂತನೆಗಳು ರಾಜ್ಯ ಮತ್ತು ದೇಶಕ್ಕೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ಫೇಸ್ ಬುಕ್, ವಾಟ್ಸಪ್‍ಗಳಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಅಭಿಮಾನಿಗಳು, ಬೆಂಬಲಿಗರು ಹಾಸನ ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಹಲವರು ಸೇರಿ ಕಟ್ಟಿಕೊಂಡಿರುವ ‘ಜೆಡಿಎಸ್ ಯುವ ಬ್ರಿಗೇಡ್ ಕೂಡ ಈ ನಿಟ್ಟಿನಲ್ಲಿ ಪ್ರಜ್ವಲ್ ಗೆ ಸಾಥ್ ನೀಡುತ್ತಿದೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋತ ಬಳಿಕ ದೇವೇಗೌಡರ ವರ್ಚಸು ಕುಸಿಯದಂತೆ ನೋಡಿಕೊಳ್ಳುವ ಜೊತೆಗೆ ರಾಷ್ಟ್ರರಾಜಕಾರಣದಲ್ಲಿ ಗೌಡರ ಘನತೆ ಹೆಚ್ಚಿಸುವ ಕಾರ್ಯತಂತ್ರಗಳ ಬಗ್ಗೆ ಪ್ರಜ್ವಲ್ ರೇವಣ್ಣ, ಸಮಯ ಸಿಕ್ಕಾಗಲೆಲ್ಲ ದೆಹಲಿಯಲ್ಲಿ ಕುಳಿತು ಕಾರ್ಯ ನಿರ್ವಹಿಸಲು ಉದ್ದೇಶಿಸಿದ್ದಾರೆ.
ಜೆಡಿಎಸ್ ಯುವ ಘಟಕದ ಜವಾಬ್ದಾರಿ ಹೊತ್ತ ನಂತರ ಉತ್ತರ ಕರ್ನಾಟಕದ ಉಸ್ತುವಾರಿಯನ್ನು ಸಹ ಪ್ರಜ್ವಲ್ ರೇವಣ್ಣ ಅವರಿಗೆ ನೀಡಲು ಪಕ್ಷದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಜೆಡಿಎಸ್ ಮೂಲಗಳು ಯುಎನ್‍ಐ ಕನ್ನಡ ಸುದ್ದಿಸಂಸ್ಥೆಗೆ ತಿಳಿಸಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಷ್ಟೇನೂ ಸಕ್ರಿಯವಾಗಿಲ್ಲ. ಜತೆಗೆ ಉತ್ತರ ಕರ್ನಾಟಕ ಭಾಗವನ್ನು ದೇವೇಗೌಡರ ಕುಟುಂಬ ನಿರ್ಲಕ್ಷಿಸುತ್ತಿದೆ ಎಂಬ ಆರೋಪವೂ ಇದೆ. ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಎದುರಾಗಲಿದ್ದು, ಸ್ಥಳೀಯ ಚುನಾವಣೆಗೆ ಪಕ್ಷ ಸಜ್ಜಾಗಬೇಕಿದೆ. ಹೀಗಾಗಿ ಪ್ರಜ್ವಲ್ ರೇವಣ್ಣಗೆ ಉತ್ತರ ಕರ್ನಾಟಕದ ಉಸ್ತುವಾರಿ ವಹಿಸಲಾಗುತ್ತಿದೆ. ಸೋಮವಾರದಿಂದ ಲೋಕಸಭೆ ಅಧಿವೇಶನ ಆರಂಭವಾಗಿದ್ದು, ಅಧಿವೇಶನ ಬಳಿಕ ಜೆಡಿಎಸ್ ಯುವ ಘಟಕ ಹಾಗೂ ಉತ್ತರ ಕರ್ನಾಟಕ ಭಾಗದ ಚಟುವಟಿಕೆಯಲ್ಲಿ ಅವರು ಸಕ್ರಿಯರಾಗಲಿದ್ದಾರೆ ಎಂದು ಇವೇ ಮೂಲಗಳು ತಿಳಿಸಿವೆ.

Leave a Comment