ಪ್ರಜಾಪ್ರಭುತ್ವ ಉಳಿವಿಗೆ ಒಬಾಮಾ ಕರೆ

ಶಿಕಾಗೊ, ಜ. ೧೧- ವರ್ಣಬೇಧ, ಅಸಮಾನತೆ ಮತ್ತು ತುಕ್ಕು ಹಿಡಿದ ರಾಜಕೀಯ ಪರಿಸರಗಳ ಬೆದರಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಎಂಟು ವರ್ಷಗಳ ಅಧಿಕಾರಾವಧಿಯ ನಂತರ ಭಾವುಕತೆಯಿಂದ ಕೂಡಿದ ವಿದಾಯ ಭಾಷಣದಲ್ಲಿ `ಅಮೆರಿಕದ ಜನತೆ ಒಗ್ಗೂಡಿ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿ’ ಎಂದು ಕಿವಿಗಡಚಿಕ್ಕುವ ಚಪ್ಪಾಳೆಗಳ ನಡುವೆ ಕರೆ ನೀಡಿದರು.
`ಭಯಕ್ಕೆ ಆಸ್ಪದ ನೀಡಿದ್ದೇ ಆದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತದೆ. ಹೊರಗಿನವರ ಆಕ್ರಮಣದ ಬಗ್ಗೆ ನಾಗರಿಕರಾದ ನಾವು ಜಾಗರೂಕರಾಗಿರಬೇಕು. ಮೌಲ್ಯಗಳು ದುರ್ಬಲಗೊಳ್ಳದಂತೆ ಕಾವಲು ಕಾಯಬೇಕು ಅದೇ ನಿಜವಾದ ನಾವು’ ಎಂದು 55 ವರ್ಷದ ಒಬಾಮಾ ತಮ್ಮೂರಿನಲ್ಲಿ ಭಾಷಣ ಮಾಡುವಾಗ ಹೇಳಿದರು.
`2008ರಲ್ಲಿ ಅಮೆರಿಕದ ಪ್ರಥಮ ಕರಿಯ ಅಧ್ಯಕ್ಷನಾಗಿ ನಾನು ಆಯ್ಕೆಗೊಂಡು ಇತಿಹಾಸ ನಿರ್ಮಿಸಿದರೂ ನಮ್ಮ ಸಮಾಜ ಒಡೆಯುವ ಪ್ರಬಲ ಶಕ್ತಿಯಾಗಿ ವರ್ಣಬೇಧ ಜೀವಂತವಾಗಿದೆ’ ಎಂದರು.
`ನನ್ನ ಆಯ್ಕೆಯ ನಂತರ ಅಮೆರಿಕದಲ್ಲಿ ವರ್ಣಬೇಧ ಇರದು ಎಂಬ ಮಾತಿತ್ತು. ಆದರೆ ಅದು ವಾಸ್ತವವಲ್ಲ’ ಎಂದವರು ಒಪ್ಪಿಕೊಂಡರು.
ಅಮೆರಿಕ ಸಂಯುಕ್ತ ಸಂಸ್ಥಾನದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸುವ ಜನವರಿ 20 ರಂದು ಒಬಾಮಾ ಅವರ ಅಧ್ಯಕ್ಷೀಯ ಅಧಿಕಾರ ಕೊನೆಗೊಳ್ಳಲಿದೆ.
ಮುಂದಿನ ವಾರಗಳಲ್ಲಿ ತಮ್ಮ ಅಧಿಕಾರ ಹಸ್ತಾಂತರ ಶಾಂತಿಯುತವಾಗಿರುತ್ತದೆ ಎಂದು ಒಬಾಮಾ ಆಶಿಸಿದರು.
2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿ ಪ್ರಸ್ತಾಪವಾದ ಟ್ರಂಪ್ ಅವರ ಮುಸ್ಲಿಮರ ವಿರುದ್ಧದ ತಾತ್ಕಾಲಿಕ ನಿಷೇಧವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಒಬಾಮಾ ಆ ಬಗ್ಗೆ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದರು.
ಅಮೆರಿಕದ ಮಿತಿಯಿಲ್ಲದ ಸಾಮರ್ಥ್ಯವನ್ನು ಹಾಡಿ ಹೊಗಳಿದ ಒಬಾಮಾ `ಭವಿಷ್ಯ ನಮ್ಮದಾಗಬೇಕು’ ಎಂದರು.
ತೀವ್ರ ಉದ್ವಿಗ್ನತೆಯಿಂದ ತಮ್ಮ ಇಡಿ ಭಾಷಣ ಮಾಡಿದ ಒಬಾಮಾ ಕೊನೆಯಲ್ಲಿ ತುಂಬಿ ಬಂದ ತಮ್ಮ ಕಣ್ಣುಗಳನ್ನು ಒರೆಸಿಕೊಂಡರು.
ಅವರ ಭಾಷಣದ ನಡುವೆ ಸಭಿಕರು ಹಠಾತ್ತನೆ ಟ್ರಂಪ್ ಅವರನ್ನು ಖಂಡಿಸುವ ಘೋಷಣಾಶಬ್ಧ ಮಾಡಿದಾಗ ಒಬಾಮಾ `ಬೇಡ, ಬೇಡ’ ಎಂದು ಹೇಳಿ, `ಒಂದೇ ದೇಶದ ಶಕ್ತಿ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದರಲ್ಲಿದೆ’ ಎಂದರು.

Leave a Comment