ಪ್ರಚಾರಕ್ಕೆ ಸಂಜೆ ತೆರೆ ತೇಜಸ್ವಿ ಮಿಂಚಿನ ಪ್ರಚಾರ

ಬೆಂಗಳೂರು, ಏ. ೧೬- ಸುಭದ್ರ ಕ್ಷೇತ್ರದಲ್ಲಿ ಮಿಂಚಿನ ಓಟದ ಕುದುರೆಯನ್ನೇರಿ ಗೆಲುವಿನ ಪ್ರಮಾಣ ಪತ್ರವನ್ನು ಲಕೋಟೆಯಲ್ಲಿಟ್ಟು ಸಂಸತ್ತಿನ ವಿಳಾಸವನ್ನು ಬರೆಯುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಳಗಾಗುತ್ತಿದ್ದಂತೆ ವಾಯುವಿಹಾರಿಗಳ ಜೊತೆ ವಿಹರಿಸಿ ಮತಬೇಟೆಯಲ್ಲಿ ತೊಡಗಿದರು.
ರಾಜ್ಯದಲ್ಲಿನ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಬಿಜೆಪಿಯ ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ಉದ್ಯಾನವನಗಳಿಗೆ ಭೇಟಿ ಬಿರುಸಿನ ಪ್ರಚಾರ ನಡೆಸಿದರು.
ಇಂದಿನ ಬಿಡುವಿಲ್ಲದ ಶೆಡ್ಯೂಲ್ ಗಳ ನಡುವೆಯೂ ಬಸವನಗುಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷ್ಣ ರಾವ್ ಪಾರ್ಕ್ ಸೇರಿದಂತೆ ಹಲವು ಉದ್ಯಾನವನಗಳಲ್ಲಿ ಸಂಚರಿಸಿ ಮತಯಾಚನೆ ನಡೆಸಿದರು.
ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಹಾಗೂ ಸ್ಥಳೀಯ ಬಿಜೆಪಿ ನಾಯಕರ ಜೊತೆ ಹೆಜ್ಜೆ ಹಾಕಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯರವರು ಬಿಜೆಪಿಗೆ ಮತನೀಡುವಂತೆ ವಾಯುವಿಹಾರಕ್ಕೆಂದು ಪಾರ್ಕ್ ಗೆ ಅಗಮಿಸಿದ್ದ ನಾಗರೀಕರಲ್ಲಿ ಮನವಿ ಮಾಡಿದರು.
ಬೆಳಗ್ಗೆ ೬:೩೦ಯಿಂದ ಜನಸಂಪರ್ಕ ಅಭಿಯಾನದಡಿ ಉದ್ಯಾನವನಗಳಿಗೆ ಭೇಟಿ ಕೊಟ್ಟ ಇವರು ವಾಕಿಂಗ್, ಜಾಗಿಂಗ್, ದೈಹಿಕ ಬೆಳಗಿನ ಅಭ್ಯಾಸ, ಯೋಗಾ ಮತ್ತು ವಾಯುವಿಹಾರಕ್ಕೆ ಆಗಮಿಸಿದ್ದವರಿಗೆ ಬಿಜೆಪಿಯ ಕರಪತ್ರಗಳನ್ನು ಹಂಚಿದರು.
ತೇಜಸ್ವಿಯ ಪ್ರತ್ಯಕ್ಷದಿಂದ ಮೋದಿ ಜೈಕಾರದ ಸಹಜ ಚಿತ್ರಣಗಳ ನಡುವೆ, ಹಿರಿಯ ನಾಗರೀಕರು ಮತ್ತು ಮಹಿಳೆಯರು ಸೆಲ್ಫಿಯನ್ನು ಇವರ ಜೊತೆ ತೆಗೆಸಿಕೊಂಡರು. ವಯೋವೃದ್ದರ ಜೊತೆಗೆ ಸ್ವತಃ ಸೂರ್ಯರವರೇ ಸೆಲ್ಫಿಯನ್ನು ತೆಗೆದುಕೊಂಡರು.
ಸುಶಿಕ್ಷಿತರು ಹೆಚ್ಚಾಗಿರುವ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ರಾಜಕೀಯ ಪ್ರಜ್ಞೆ ಮೂಡಿಸಿ ಮತದಾನದ ಶೇಕಡಾವಾರು ಹೆಚ್ಚಳಕ್ಕೆ ಪಣತೊಟ್ಟಿರುವ ತೇಜಸ್ವಿ ಸೂರ್ಯ, ಸಾರ್ವಜನಿಕರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ವಿನಂತಿಸಿಕೊಂಡರು.
ಹಸಿರುಮಯ, ಸ್ವಚ್ಚತೆಯಿಂದ ಕೂಡಿದ ನವ ಬೆಂಗಳೂರಿನ ನಿರ್ಮಾಣಕ್ಕಾಗಿ ಕೈಜೋಡಿಸುವಂತೆ ಕರೆ ನೀಡಿದ ಅವರು ದೇಶದ ಭವಿಷ್ಯದ ದೃಷ್ಟಿಯಿಂದ ಭ್ರಷ್ಟಾಚಾರ ರಹಿತ, ವಿಶ್ವಾಸಾರ್ಹ, ಜನಪರವಾದ ಪಾರದರ್ಶಕ ಸರ್ಕಾರಕ್ಕಾಗಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ಕೋರಿದ ಅವರು ಸದೃಡ ಭಾರತವನ್ನು ಕಟ್ಟಲು ಮತದಾರರಲ್ಲಿ ಮನವಿ ಮಾಡಿದರು.
ಇದೆ ವೇಳೆ, ಸ್ವಯಂಪ್ರೇರಿತರಾಗಿ ಬಂದು ಬೆಂಬಲ ಸೂಚಿಸಿದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಮತಗಟ್ಟೆಯ ಮೊದಲ ಮತದಾರನಾಗಿ ನಂತರ ನೆರೆಹೊರೆಯ ಮತದಾರರನ್ನು ಮತಗಟ್ಟೆಗೆ ಕರೆ ತರುವ ಕೆಲಸವನ್ನು ಮಾಡುವಂತೆ ತಿಳಿಸಿದರು.

Leave a Comment