ಪ್ರಚಾರಕ್ಕೆ ದ್ವಿಚಕ್ರ ವಾಹನಗಳ ಸಂಖ್ಯೆಗೆ ನಿಯಂತ್ರಣ

ಬೆಂಗಳೂರು, ಏ. ೧೫- ಬೆಂಗಳೂರು ಉತ್ತರ, ದಕ್ಷಿಣ ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪ್ರಚಾರ ಮಾಡುವ ವೇಳೆ ಆಯೋಗ ನಿಗದಿಪಡಿಸಿದಷ್ಟೇ ದ್ವಿಚಕ್ರ ವಾಹನಗಳನ್ನು ಬಳಸಬೇಕು. ಹೆಚ್ಚು ವಾಹನಗಳನ್ನು ಬಳಸಿದರೆ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಭೂಕಂದಾಯ ಮತ್ತು ಭೂಮಾಪನ ಇಲಾಖೆ ಆಯುಕ್ತ ಹಾಗೂ ಬೆಂಗಳೂರು ನಗರ ಜಿಲ್ಲೆಯ ಮಾದರಿ ನೀತಿ ಸಂಹಿತೆ ಜಾರಿ ವಿಶೇಷ ಅಧಿಕಾರಿ ಮೌನ್ಷಿ ಮುದ್ಗಿಲ್ ಅವರು ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪಕ್ಷೇತರ ಅಭ್ಯರ್ಥಿಗಳ ಸಭೆ ನಡೆಸಿದ ಅವರು ಕೆಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರಚಾರ ಱ್ಯಾಲಿಯಲ್ಲಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಬಳಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಇದರಿಂದ ಆ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಹೇಳಿದರು.
ಪ್ರಚಾರ ಱ್ಯಾಲಿಯಲ್ಲಿ ಭಾಗವಹಿಸುವ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನದ ನಂಬರ್ ಅನ್ನು ನೋಂದಾಯಿಸಿ ಅನುಮತಿ ಪಡೆಯಬೇಕು. ಆದರೆ ಅನುಮತಿ ಪಡೆಯದ ದ್ವಿಚಕ್ರ ವಾಹನಗಳ ಸವಾರರು ಱ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೇರಿದಂತೆ ಕೆಲ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಖರ್ಚು ಮಾಡುತ್ತಿರುವ ಹಣವನ್ನು ಆಯಾ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುವುದು ಎಂದು ಹೇಳಿದರು.
ಪೊಲೀಸ್ ವಾಹನಗಳು ಪ್ರಮುಖ ರಾಜಕೀಯ ಪಕ್ಷಗಳ ನೇಕಾರರು ಪ್ರಯಾಣಿಸುವ ಕಾರುಗಳು ಮತ್ತು ಆಂಬುಲೆನ್ಸ್‌ಗಳಲ್ಲಿ ಹಣ ಸಾಗಿಸಲಾಗುತ್ತಿವೆ ಆಯಾ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರೇ ಸಹಕರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಎಲ್ಲಾ ಬಗೆಯ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲೇ ಬೇಕು ಇಲ್ಲವಾದಲ್ಲಿ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇವರಿಗೆ ಆಂಬುಲೆನ್ಸ್‌ಗಳ ಮತ್ತು ಪೊಲೀಸ್ ವಾಹನಗಳಲ್ಲಿ ಹಣ ಕೊಂಡೊಯ್ಯಲಾಗಿದೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉತ್ತರ ಕೇಂದ್ರ, ದಕ್ಷಿಣ ಕೇಂದ್ರ ಕ್ಷೇತ್ರಗಳಲ್ಲಿ ಈವರೆಗೆ 50 ಸಾವಿರ ದೂರುಗಳು ದಾಖಲಾಗಿವೆ. ಬಹುತೇಕ ದೂರುಗಳು ಗುರುತಿನ ಚೀಟಿ ಹಾಗೂ ಚುನಾವಣೆ ಸಂಬಂಧದ ಬಗ್ಗೆ ಬಂದಿವೆ. ಕೆಲವು ನಕಲಿ ದೂರುಗಳು ಇವೆ. ಈಗಾಗಲೇ ಶೇ. 95 ರಷ್ಟು ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಮೌನ್ಷಿ ಮುದ್ಗಿಲ್ ಅವರು ತಿಳಿಸಿದರು.
ಕಟ್ಟುನಿಟ್ಟಿನ ತಪಾಸಣೆ ನಂತರ ಒಂದೂವರೆ ಲಕ್ಷ ಮದ್ಯೆ, ಒಂದೂವರೆ ಕೋಟಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳು ದೂರುಗಳನ್ನು ಸಲ್ಲಿಸಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ. ಲೋಕೇಶ್ ಉಪಸ್ಥಿತರಿದ್ದರು.

Leave a Comment