ಪ್ರಚಾರಕ್ಕಾಗಿ ಹೇಳಿಕೆ ನೀಡುವುದು ಸರಿಯಲ್ಲ

ದಾವಣಗೆರೆ.ಆ.24;  ನಗರಾದ್ಯಂತ ವಾರಕ್ಕೆರಡು ಬಾರಿ ನೀರು ಹರಿಸುವ ಬಗ್ಗೆ ಈಗಾಗಲೇ ಶಾಸಕರು ಕ್ರಮಕೈಗೊಂಡಿದ್ದಾರೆ. ಆದರು ಸಹ ಕೇವಲ ಪ್ರಚಾರ ಪಡೆಯಲು ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಕುಂದಪ್ಪ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಕುಂದುವಾಡ ಕೆರೆ ಹಾಗೂ ಟಿಬಿ ಸ್ಟೇಷನ್ ಕೆರೆಗಳಲ್ಲಿ ತೆಗೆದ ಮಣ್ಣು ಎಲ್ಲಿಗೆ ಹೋಗಿದೆ ಎಂಬುದು ಜನತೆಗೆ ಗೊತ್ತಿದೆ. ಕೇವಲ ಒಬ್ಬರಿಂದ ನಗರದ ಅಭಿವೃದ್ದಿಯಾಗಿಲ್ಲ ಭದ್ರ ಡ್ಯಾಂ ನಿಂದ ನೀರು ತಂದವರು ಯಾರು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಉತ್ತರ, ದಕ್ಷಿಣ ಎಂಬ ಬೇಧಭಾವ ಮಾಡದೆ ಶಾಸಕ ರವೀಂದ್ರನಾಥ್ ಅವರು ನಗರದ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಾರೆ. ಆರೋಪ ಮಾಡುವ ಮೊದಲು ಅದನ್ನು ತಿಳಿದುಕೊಳ್ಳಬೇಕು. ಪ್ರಚಾರಕ್ಕಾಗಿ ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. ಮುಂದಿನ ಮಹಾನಗರ ಪಾಲಿಕೆಯಲ್ಲೂ ಸಹ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಜನರ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ರೀತಿಯಲ್ಲಿ ಸ್ಪಂದನೆ ದೊರೆಯಲಿದೆ. ಕಾಂಗ್ರೆಸ್ ನವರ ದುರಾಡಳಿತದಿಂದಾಗಿ ನಗರದಲ್ಲಿ ನೀರಿನ ಸಮಸ್ಯೆ ಇತ್ತು. ಆದರೀಗ ಶಾಸಕ ಎಸ್.ಎ.ರವೀಂದ್ರನಾಥ್ ಅವರು ನೀರು ಸರಬರಾಜಿಗೆ ಬೇಕಾಗಿರುವ ಎಲ್ಲಾ ಕ್ರಮಕೈಗೊಂಡಿದ್ದು ಆಗಸ್ಟ್ 23 ರಿಂದಲೇ ಪಿಬಿ ರಸ್ತೆ ಮೇಲ್ಭಾಗದ ಜನರಿಗೆ ವಾರಕ್ಕೆರಡು ಬಾರಿ ಹಾಗೂ ಹಳೇ ಭಾಗಕ್ಕೆ ಆಗಸ್ಟ್ 26 ರಿಂದ ನೀರಿನ ತೊಂದರೆಯಾಗದಂತೆ ನೀರು ಬಿಡಲು ಈಗಾಗಲೇ ಕ್ರಮವಹಿಸಲಾಗಿದೆ. ಕಾಂಗ್ರೆಸ್ ನ ಅಧಿಕಾರವಧಿಯಲ್ಲಿ ಯಾವ ಘನಂದಾರಿ ಕೆಲಸ ಮಾಡಿದ್ದಾರೆಂದು ಜನರಿಗೆ ಗೊತ್ತಿದೆ. ಆದ್ದರಿಂದ ಇನ್ನೊಬ್ಬರ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಶಿವರಾಜ್ ಪಾಟೀಲ್ ಮಾತನಾಡಿ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಜಲಸಿರಿ ಸಮರ್ಪಕವಾಗಿ ಜಾರಿಗೊಳ್ಳುತ್ತಿದೆ. ಆದರೆ ನಗರದೆಲ್ಲೆಡೆ ಕಾಂಕ್ರೀಟ್ ರಸ್ತೆ ಮಾಡುವ ಮೊದಲೇ ಪೈಪ್ ಲೈನ್ ಕೆಲಸ ನಡೆಯಬೇಕಿತ್ತು. ಅದನ್ನು ಬಿಟ್ಟು ತರಾತುರಿಯಲ್ಲಿ ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದಾರೆ. ಇದರಿಂದ ಪದೇ ಪದೇ ರಸ್ತೆ ಕಿತ್ತು ಹಾಕಿ ಕಾಮಗಾರಿ ನಡೆಸಬೇಕಾದಂತಹ ಅನಿವಾರ್ಯತೆ ಎದುರಾಗಿದೆ.ಸಾರ್ವಜನಕರ ಕೋಟ್ಯಾಂತರ ರೂ ನಷ್ಟವಾಗುತ್ತಿದೆ. ಬೀದಿ ದೀಪ ಹಾಕಿಸುವುದು ಅಭಿವೃದ್ದಿಯಲ್ಲ, ಪ್ರತಿಯೊಬ್ಬರಿಗೂ ಮೂಲಭೂತ ಸೌಲಭ್ಯ ನೀಡುವುದು ಮುಖ್ಯ ಎಂದರು.
ಸುದ್ದಿಗೋಷ್ಟಿ ಪಿಸಾಳೆ ಕೃಷ್ಣ, ಅತಿಥ್ ಅಂಬರಕರ್, ಬಾತಿ ವೀರೇಶ್, ಮಂಜಣ್ಣ ಹನುಂತಪ್ಪ ಮತ್ತಿತರರಿದ್ದರು.

Leave a Comment