ಪ್ರಕಾಶ ಬೆಂಡಿಗೇರಿ ಓರ್ವ ಕ್ರಿಯಾಶೀಲ ಸಮಾಜ ಸೇವಕ

ಪ್ರಕಾಶ ಬೆಂಡಿಗೇರಿ ಓರ್ವ ಕ್ರಿಯಾಶೀಲ ಸಮಾಜ ಸೇವಕರು. ಪ್ರಕಾಶ  ವೃತ್ತಿಯಿಂದ ಇಂಜನೀಯರ್‍ರಾಗಿ, ಪ್ರಗತಿಪರ ಕೃಷಿಕರಾಗಿ, ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರಲ್ಲದೇ ಸಹಕಾರಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ದೇಸಾಯಿ ಓಣಿಯ ಕಡು ಬಡ ಕುಟುಂಬದಲ್ಲಿ ಜನಿಸಿದ ಪ್ರಕಾಶ ಸ್ಥಳೀಯ 3ನೇ ನಂ. ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಗಂಗಾಧರ ಹೈಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣ ಹಾಗೂ ಕಾಲೇಜ್ ವಿದ್ಯಾಭ್ಯಾಸ ಕೋತಂಬ್ರಿ ಕಾಲೇಜಿನಲ್ಲಿ ಪೂರೈಸಿ ಧಾರವಾಡದ ಜೆಎಸ್‍ಎಸ್ ವಿದ್ಯಾ ಸಂಸ್ಥೆಯಿಂದ ಬಿಲ್ಡಿಂಗ್ -ರೋಡ್ ಕನ್ಸಟ್ರಕ್ಷನ್ ಡಿಪ್ಲೋಲೀಮಾ ಮುಗಿಸಿ ಇಂಜನೀಯರ್ ವೃತ್ತಿ ಆರಂಭಿಸಿದರು.
ತಂದೆ ವಿರುಪಾಕ್ಷಪ್ಪ ಹಾಗೂ ತಾಯಿ ದಿ.  ಸಿದ್ದಮ್ಮ ಅವರು ರಸ್ತೆಯಲ್ಲಿ ಬಜಿ, ಮಿರ್ಚಿ, ಚುರುಮುರಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದರೂ ತಮಗೆ  ಶಿಕ್ಷಣ ನೀಡಿದ್ದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಬಡ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ದೊರಕಬೇಕೆಂಬ ಮಹದಾಸೆಯಿಂದ ಭಾರತ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ಅದರಗುಂಚಿಯಲ್ಲಿ ಭಾರತ ಕಾನ್ವೆಂಟ್ ಸ್ಕೂಲ್ ಸ್ಥಾಪಿಸಿದ್ದು, ಬಿಡ್ನಾಳದಲ್ಲೂ ಪುಣ್ಯಭೂಮಿ ಕಾನ್ವೆಂಟ್ ಆರಂಭಿಸಿದ್ದಾರೆ. ಅಲ್ಲದೇ ತಮ್ಮ ಸಂಸ್ಥೆ  ಮುಖಾಂತರ 2 ಸಾವಿರಕ್ಕೂ ಹೆಚ್ಚು ಯುವತಿಯರಿಗೆ  ಉಚಿತ ಹೊಲಿಗೆ ತರಬೇತಿ ಹಾಗೂ  ಕಂಪ್ಯೂಟರ್ ತರಬೇತಿ ನೀಡಿದ್ದಾರೆ.
ರಂಭಾಪುರಿ ಪೀಠದ ಪರಮಭಕ್ತರಾದ ಬೆಂಡಿಗೇರಿಯವರು ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯ ತಾಲೂಕಾ ಅಧ್ಯಕ್ಷರಾಗಿ, ಜೈಂಟ್ಸ್  ಸಂಸ್ಥೆ ಸದಸ್ಯರಾಗಿ, ಹುಬ್ಬಳ್ಳಿ ರೈಫಲ್ ಅಸೋಸಿಯೇಶನ್  ಅಧ್ಯಕ್ಷರಾಗಿ, ಯೋಗ ಶಿಬಿರಗಳನ್ನು ಸಂಘಟಿಸಿದ್ದಾರಲ್ಲದೇ, ಸಹಕಾರಿ ಸಂಘವನ್ನು  ಹುಟ್ಟು ಹಾಕಿ ಅದರಲ್ಲೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಯಲ್ಲಾಪುರ ಓಣಿ, ದೇಸಾಯಿ ಓಣಿ ಪ್ರದೇಶದಲ್ಲಿ ಯಾವುದೇ ಸಮಸ್ಯೆಗಳಿರಲಿ ಅದಕ್ಕೆ ಸ್ಪಂದಿಸುವ ಇವರಿಗೆ ಹು-ಧಾ ಮಹಾನಗರ ಪಾಲಿಕೆಯಿಂದ ` ಧೀಮಂತ ನಾಯಕ’ ರಾಜ್ಯೋತ್ಸವ ಪ್ರಶಸ್ತಿ, ರಂಭಾಪುರಿ ಪೀಠದ ಯುವಸಿರಿ ಪುರಸ್ಕಾರ, ಹೊಸದಿಲ್ಲಿ ಸಂಸ್ಥೆಯಿಂದ ಇಂಜನೀಯರಿಂಗ್ ಕ್ಷೇತ್ರದ ಸಾಧನೆಗಾಗಿ ನೀಡುವ `ರಾಷ್ಟ್ರ ನಿರ್ಮಾಣ ರತ್ನ’ ಪ್ರಶಸ್ತಿಗಳು ಬಂದಿವೆ.
ತಾವು ಬಾಳುವುದರ ಜತೆ ಸಮಾಜದ ಏಳ್ಗೆಯನ್ನು ಬಯಸುವ ಬೆಂಡಿಗೇರಿಯವರ ಪತ್ನಿ ವಿನೋದಾ ಕೂಡಾ ಇವರ ಯಶಸ್ಸಿನ ಹಿಂದಿನ ಶಕ್ತಿ. ಶಿವ, ವೀರಭದ್ರ ಇಬ್ಬರ ಮಕ್ಕಳ ಸುಖಿ ಸಂಸಾರ. ಧರ್ಮ, ತತ್ವದಲ್ಲಿ ನಂಬಿಕೆ ಇರಿಸಿಕೊಂಡು ಸದಾ ಏನನ್ನಾದರೂ  ಹೊಸದನ್ನೇನಾದರೂ  ಸಾಧಿಸಬೇಕೆಂಬ ತುಡಿತ ಹೊಂದಿರುವ ಬೆಂಡಿಗೇರಿಯವರು ,ಹೃದಯವೇ ಗುರು, ಕಾಲವೇ ಶಿಕ್ಷಕ, ಜೀವನವೇ ತೆರೆದ ಪುಸ್ತಕವೆಂಬಂತೆ ನಡೆಯುತ್ತಿದ್ದು ಅವರು ಮತ್ತಷ್ಟು ಸಮಾಜ ಮುಖಿಯಾಗಿ ಎತ್ತರಕ್ಕೇರಲಿ ಎಂಬುದು ಹಾರೈಕೆ.
ಪ್ರಕಾಶ ಬೆಂಡಿಗೇರಿ ಹಾಗೂ ಶ್ರೀಮತಿ  ವಿನೋದಾ ಅವರ ವಿವಾಹ ವಾರ್ಷಿಕೋತ್ಸವದ ಬೆಳ್ಳಿಹಬ್ಬ ಸಮಾರಂಭ ದಿ.14 ರಂದು ಗುರುವಾರ 11 ಗಂಟೆಗೆ ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ನಡೆಯಲಿದೆ.
ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳಾದ ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಪೀಠದ ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮ 20 ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ , ಶಾಸಕರುಗಳಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಸಿ. ಎಸ್. ಶಿವಳ್ಳಿ, ಅಮೃತ ದೇಸಾಯಿ, ಸಿ. ಎಂ. ನಿಂಬಣ್ಣವರ,ಬಸವರಾಜ  ಹೊರಟ್ಟಿ, ಅರವಿಂದ ಬೆಲ್ಲದ,ಸಹಿತ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
`ವೀರಶೈವ ಧರ್ಮ ಮಾರ್ಗ’ ಪುಸ್ತಕವನ್ನು ವಿಆರ್ ಎಲ್ ಸಮೂಹದ ಮುಖ್ಯಸ್ಥ ಡಾ. ವಿಜಯ ಸಂಕೇಶ್ವರ  ಬಿಡುಗಡೆ   ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ  ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ  ಮಾಡಿರುವ  ಡಾ. ಎಂ. ಎಂ. ಜೋಶಿ ,ಡಾ. ಪ್ರಭು ಬಿರಾದಾರ (ವೈದ್ಯಕೀಯ), ಯಲ್ಲಮ್ಮ ಉಗರಗೋಳ (ಕೃಷಿ), ಪ್ರಕಾಶ ಕಂಬಳಿ( ಶಿಕ್ಷಣ), ಪ್ರಸನ್ನ ಭೋಜಶೆಟ್ಟರ್(ಸಂಗೀತ), ವೈ,ಬಿ. ಆಲೂರ( ಧಾರ್ಮಿಕ), ಶಿವಲಿಂಗಪ್ಪ ಬಡಿಗೇರ(ಕಲೆ), ಗಣಪತಿ ಗಂಗೊಳ್ಳಿ( ಮಾಧ್ಯಮ) , ಶಶಿ ಡಂಗನವರ( ಪರಿಸರ), ಮಲ್ಲಯ್ಯ ಶಂಬಾಳಿಮಠ( ಸಮಾಜಸೇವೆ) ಇವರನ್ನು `ಸೇವಾ ಧೀಮಂತ’ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ಬೆಳ್ಳಿ ಹಬ್ಬ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಶಂಕರಣ್ಣ ಮುನವಳ್ಳಿ ಹಾಗೂ ಅಧ್ಯಕ್ಷ ಮೋಹನ ಲಿಂಬಿಕಾಯಿ ತಿಳಿಸಿದ್ದಾರೆ.

Leave a Comment