ಪ್ಯಾರಾ ಒಲಿಂಪಿಕ್ಸ್ : ಸುಂದರ್ ಸಿಂಗ್‌ಗೆ ಚಿನ್ನದ ಪದಕ

 

ದುಬೈ, ನ ೧೧- ದುಬೈನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋ ವಿಭಾಗದ ಪಂದ್ಯದಲ್ಲಿ ಭಾರತದ ಅಗ್ರ ಜಾವೆಲಿನ್ ಥ್ರೋ ಪಟು ಸುಂದರ್ ಸಿಂಗ್ ಗುಜ್ರಾರ್ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಭುಜದ ಗಾಯವಾಗಿದ್ದರೂ ಅದನ್ನು ಮೆಟ್ಟಿ ನಿಂತು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯನ್ನು ಸುಂದರ್ ಸಿಂಗ್ ಗುಜ್ರಾರ್ ಯಶಸ್ವಿಯಾಗಿ ಮುಗಿಸಿದ್ದಾರೆ.

ಕಳೆದ ೨೦೧೭ರ ಲಂಡನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಸುದರ್, ಇದೀಗ ದೋಹಾದಲ್ಲಿ ನಡೆಯುತ್ತಿರುವ ಪ್ಯಾರಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮತ್ತೊಂದು ಸ್ವರ್ಣ ಪದಕ ಸಾಧನೆ ಮಾಡುವ ಮೂಲಕ ಭಾರತದ ದೇವೇಂದ್ರ ಜಜ್ರಾರಿಯಾ ಅವರ ಸಾಧನೆ ಸರಿಗಟ್ಟಿದ್ದಾರೆ. ದೇವೇಂದ್ರ ಜಜ್ರಾರಿಯಾ ಅವರು ೨೦೧೩ರ ಲಿಯಾನ್ ಹಾಗೂ ೨೦೧೫ ರ ದೋಹಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು. ಫೈನಲ್ ಸುತ್ತಿನ ಐದನೇ ಪ್ರಯತ್ನದವರೆಗೂ ಸುಂದರ್ ಸಿಂಗ್ ಎರಡನೇ ಸ್ಥಾನದಲ್ಲೇ ಮುಂದುವರಿದಿದ್ದರು. ಆದರೆ, ಆರನೇ ಪ್ರಯತ್ನದಲ್ಲಿ ಜಾವೆಲಿನ್ ಅನ್ನು ೬೧.೨೨ ಮೀ. ಎಸೆಯುವ ಮೂಲಕ ಅಗ್ರ ಸ್ಥಾನಕ್ಕೆ ಜಿಗಿದರು. ಐದು ಪ್ರಯತ್ನಗಳಲ್ಲಿ ಮುನ್ನಡೆಯಲ್ಲಿದ್ದ ಶ್ರೀಲಂಕಾದ ದಿನೇಶ್ ಪಿ. ಹೆರಾಥ್ ಅವರು ಎರಡನೇ ಸ್ಥಾನಕ್ಕೆ ತೃಪ್ತಗೊಂಡರು.

ಭಾರತದ ಇತರೆ ಅಥ್ಲಿಟ್‌ಗಳಾದ ಅಜೀತ್ ಸಿಂಗ್ ಅವರು ೫೯.೪೬ ಮೀ. ಎಸೆದು ಕಂಚಿನ ಪದಕಕ್ಕೆ ತೃಪ್ತರಾದರೆ, ರಿಂಕು ೫೭.೫೯ ಮೀ.ನೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಸುಂದರ್ ಸಿಂಗ್ ಜತೆ ಅಜೀತ್ ಸಿಂಗ್ ಹಾಗೂ ರಿಂಕು ೨೦೨೦ರ ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ಸಫಲರಾದರು.

ಇದಕ್ಕೂ ಮುನ್ನ ಸಂದೀಪ್ ಚೌಧರಿ ಹಾಗೂ ಸುಮೀತ್ ಅಂತಿಲ್ ಅವರು ಮುಂದಿನ ವರ್ಷದ ಪ್ಯಾರಾ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು. ಇದೀಗ ಇನ್ನೂ ಮೂರು ಸ್ಥಾನಗಳು ಖಚಿತವಾಗಿವೆ. ಪ್ರಸ್ತುತ ನಡೆಯುತ್ತಿರುವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು ಸಿಕ್ಕಿದೆ.

Leave a Comment