ಪೌಷ್ಟಿಕ ಆಹಾರ ಶಿಬಿರ

ಚನ್ನಗಿರಿ.ಸೆ.9; ಮಕ್ಕಳಲ್ಲಿ ಉಂಟಾಗುತ್ತಿರುವ ಅಪೌಷ್ಟಿಕತೆಯನ್ನು ದೂರ ಮಾಡುವ ಉದ್ದೇಶದಿಂದ ಸರಕಾರವು ಮಹಿಳಾ ಮಕ್ಕಳ ಇಲಾಖೆಯ ಮೂಲಕ ಗರ್ಭಿಣಿ ಮತ್ತು ಬಾಣಂತಿಯರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪೌಷ್ಟಿಕ ಆಹಾರ ಶಿಬಿರವನ್ನು ಹಮ್ಮಿಕೊಂಡಿದ್ದು ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಸಿಡಿಪಿಓ ಸದಾನಂದ ಹೇಳಿದರು.
ಪಟ್ಟಣದ 22 ನೇ ಅಂಗವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌಷ್ಟಿಕ ಆಹಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಸರಕಾರವು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಮಾತೃಪೂರ್ಣ ಮತ್ತು ಮಾತೃ ವಂದನದಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಂಗವಾಡಿ ಕೇಂದ್ರಗಳಲ್ಲಿ ಊಟ ಸೇರಿದಂತೆ ಕಾಳು ಮತ್ತು ಮೊಟ್ಟೆ, ಹಾಲು ನೀಡುತ್ತಿದೆ. ಆದರೆ ಮಹಿಳೆಯರು ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆಯನ್ನು ತಿನ್ನದೇ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಮತ್ತು ಕೇಂದ್ರಗಳಲ್ಲಿ ಊಟ ಮಾಡಲು ಹಿಂದೇಟು ಹಾಕುತ್ತಾರೆ. ಮಕ್ಕಳಿಗೂ ಸಹ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಪೌಷ್ಟಿಕ ಆಹಾರವನ್ನು ಸಹ ನೀಡಲಾಗುತ್ತಿದೆ. ಆದರೆ ಪೋಷಕರು ಇಂಗ್ಲೀಷ್ ಕಾನ್ವೆಂಟ್‍ಗಳ ವ್ಯಾಮೋಹಕ್ಕೆ ಬಿದ್ದು ಹೆಚ್ಚು ಹಣ ನೀಡಿ ಕಾನ್ವೆಂಟ್‍ಗಳಿಗೆ ಸೇರಿಸಲು ಹೊರಟಿದ್ದಾರೆ. 6 ವರ್ಷದೊಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಅಂಗನವಾಡಿ ಕೇಂದ್ರಗಳಲ್ಲಿ ಕೊಡಿಸಿದಾಗ ಮಕ್ಕಳು ಪೌಷ್ಟಿಕ ಅಹಾರದೊಂದಿಗೆ ಸದೃಡವಾಗಿ ಇರುತ್ತಾರೆ ಎಂದರು.
ಪುರಸಭೆಯ ನೂತನ ಸದಸ್ಯ ಪರಮೇಶ್ ಪಾರಿ ಮಾತನಾಡಿ ನಮ್ಮ ವಾರ್ಡನಲ್ಲಿ ಇರುವಂತಹ ಅಂಗನವಾಡಿ ಕೇಂದ್ರವು ಬಾಡಿಗೆ ಕಟ್ಟಡದಲ್ಲಿ ಇದ್ದು ಪುರಸಭೆಯ ಖಾಲಿ ನಿವೇಶನ ಇದ್ದರೆ ಶಾಸಕರ ಬಳಿ ಮನವಿ ಮಾಡಿ ಅಂತಹ ನಿವೇಶನವನ್ನು ಈ ಕೇಂದ್ರಕ್ಕೆ ಕೊಡಿಸುವ ಪ್ರಯತ್ನ ಮಾಡಲಾಗುವುದು. ಮಹಿಳೆಯರು ಸರಕಾರದ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಪ್ರೇಮಾ, ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾರಾಣಿ , ಗೀತಾ, ಪಾರ್ವತಿ, ಬಿಜೆಪಿ ನಗರ ಘಟಕ ಮಹಿಳಾ ಕಾರ್ಯದರ್ಶಿ ನಿರ್ಮಲ ಇತರರು ಹಾಜರಿದ್ದರು.

Leave a Comment