ಪೌರ ಕಾರ್ಮಿಕರ ಸಾವು: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ತುಮಕೂರು, ಆ. ೧೦- ಶಿವಮೊಗ್ಗದ ನಿರ್ಮಾಣ ಹಂತದ ಮ್ಯಾನ್‌ಹೋಲ್‌ಗೆ ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು. ಜತೆಗೆ ಅವರ ಸಾವಿಗೆ ಕಾರಣರಾದ ಗುತ್ತಿಗೆದಾರರು ಮತ್ತು ಎಂಜಿನಿಯರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಭಾರತೀಯ ಕಾರ್ಮಿಕ ಸಂಘಗಳ ಕೇಂದ್ರ (ಸಿಐಟಿಯು) ನೇತೃತ್ವದಲ್ಲಿ ನಗರದ ಟೌನ್‌ಹಾಲ್‌ನಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

ಎರಡು ದಿನಗಳ ಹಿಂದೆಯಷ್ಟೇ ಶಿವಮೊಗ್ಗ ನಗರಕ್ಕೆ ಬಂದು ಬೀಡುಬಿಟ್ಟಿದ್ದ ಅಂಜನಪ್ಪ ಮತ್ತು ವೆಂಕಟೇಶ್ ಶಿವಮೊಗ್ಗ ನಗರದ ಆರ್ಎಂಎಲ್ ನಗರ ಎರಡನೇ ಹಂತದ ಕಾಮಗಾರಿ ನಡೆಯುವಾಗ ಮೃತಪಟ್ಟಿದ್ದು, ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯವೇ ಎಂದು ಆಗ್ರಹಿಸಿದರು.

ಕಾರ್ಮಿಕರನ್ನು ಮ್ಯಾನ್‌ಹೋಲ್‌ಗಳಿಗೆ ಇಳಿಸಬಾರದು ಎಂಬ ನಿಯಮ ಇದೆ. ಆದರೂ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗಳಿಗೆ ಇಳಿಸಲಾಗುತ್ತಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಪದೇಪದೇ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಕಾರ್ಮಿಕರು ಮ್ಯಾನ್‌ಹೋಲ್‌ನಲ್ಲಿ ಇಳಿಯಲು ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಕಾನೂನನ್ನು ಗಾಳಿಗೆ ತೂರಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಆಗ್ರಹಿಸಿದರು.

ಕಾರ್ಮಿಕರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಹಾಗೂ ಅವಲಂಬಿತ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಮತ್ತು ಮಕ್ಕಳ ವಿದ್ಯಾಭ್ಯಾಸ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಲಕ್ಷ್ಮಣ್, ಪೌರಕಾರ್ಮಿಕರ ಸಂಘದ ನಗರಾಧ್ಯಕ್ಷ ಬಿ.ಜಿ. ರಾಮಕೃಷ್ಣಪ್ಪ ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ನಾಗರಾಜು, ಹನುಮಂತರಾಜು, ರಾಜು, ಜಯಲಕ್ಷ್ಮೀ, ಶಾಂತಮ್ಮ, ಅಂಜನಮೂರ್ತಿ, ಶಿವಣ್ಣ, ರಂಗಯ್ಯ, ರಾಮು, ಸಿದ್ದರಾಜು, ನಾಗೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Comment