ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೂ.17ಕ್ಕೆ ಧರಣಿ

ಬೆಂಗಳೂರು, ಜೂನ್ 13 – ನೇರ ವೇತನ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂ. 17ರಂದು ಬಿಬಿಎಂಪಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ರಾಜ್ಯಾಧ್ಯಕ್ಷ ಮೈಸೂರು ನಾರಾಯಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇರ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾಂಕೇತಿಕ ಧರಣಿ ನಡೆಸಲಾಗುವುದು, ಬಿಬಿಎಂಪಿ 4 ಸಾವಿರ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಇದನ್ನು ಕೂಡಲೆ ರದ್ದು ಮಾಡಿ ಈಗಿರುವ ಬೆಂಗಳೂರಿನ  18 ಸಾವಿರ ಪೌರಕಾರ್ಮಿಕರೆಲ್ಲರನ್ನು ನೇರ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ನೇರ ವೇತನ ಪೌರ ಕಾರ್ಮಿಕರು ಕೆಲಸದ ವೇಳೆ ಅಪಘಾತಕ್ಕೀಡಾಗಿ ಮರಣ ಹೊಂದಿದರೆ ಶವ ಸಂಸ್ಕಾರಕ್ಕೆ ತಕ್ಷಣ ಬಿಬಿಎಂಪಿ ವತಿಯಿಂದ ರೂ.20 ಸಾವಿರ ಹಾಗೂ ಅವರ ಕುಟುಂಬಸ್ಥರಿಗೆ ರೂ.10 ಲಕ್ಷ ಪರಿಹಾರ ನೀಡಬೇಕು. ಇದಲ್ಲದೆ ಅವರಿಗೆ ಸಿ.ಎಲ್, ಪಿ.ಎಲ್, ಸೇರಿಸಿ ತಿಂಗಳಿಗೆ 3 ದಿನಗಳು ವೇತನ ಸಹಿತ ರಜೆ ನೀಡಬೇಕು ಎಂದು ಆಗ್ರಹಿಸಿದರು.

ಬಿಬಿಎಂಪಿಯಲ್ಲಿ ಘನತ್ಯಾಜ್ಯ ಟೆಂಡರ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳಿಗೆ ಶೇ.50ರಷ್ಟು ಮೀಸಲಾತಿ ನೀಡಿ, ಠೇವಣಿಯಲ್ಲಿ ರಿಯಾಯಿತಿ ನೀಡಬೇಕೆಂಬ ಹಲವಾರು ಬೇಡಿಕೆಗಳನ್ನಿಟ್ಟು ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.

Leave a Comment