ಪೌರ ಕಾರ್ಮಿಕರೊಂದಿಗೆ ಅಪ್ಪ-ಮಗಳ ಸಂಕ್ರಾಂತಿ ಸಂಭ್ರಮ

ಬೆಂಗಳೂರು, ಜ ೧೪-ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜಯನಗರದಲ್ಲಿ ಪೌರಕಾರ್ಮಿಕರೊಂದೊಗೆ ಶಾಸಕರಾದ ರಾಮಲಿಂಗಾ ರೆಡ್ಡಿ ಹಾಗೂ ಸೌಮ್ಯರೆಡ್ಡಿ, ಪಾಲಿಕೆ ಸದಸ್ಯ ನಾಗರಾಜು ಅವರು ಸುಗ್ಗಿ ಹಬ್ಬ ಆಚರಿಸಿ ಮಾದರಿಯಾಗದ್ದಾರೆ.
ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಪೌರ ಕಾರ್ಮಿಕರಿಗೆ ಎಳ್ಳು ಬೆಲ್ಲದ ಜೊತೆಗೆ, ಸೀರೆ, ರವಿಕೆ, ಪ್ಯಾಂಟ್ ಶರ್ಟ್ ಮತ್ತು ಉಡುಗೊರೆಗಳನ್ನು ವಿತರಿಸಲಾಯಿತು. ಜೊತೆಗೆ ಹಸುಗಳನ್ನು ಸಿಂಗರಿಸಿ, ಕಾರ್ಮಿಕರಿಗೆ ಪೊಂಗಲ್ ತಯಾರಿಸಿ ಹಂಚಲಾಯಿತು. ಪ್ರತಿನಿತ್ಯ ಮನೆಗಳಿಂದ ಕಸ ಕೊಂಡೊಯ್ಯುವ, ಬೀದಿಗಳನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ರೂವಾರಿಗಳಾದ ಪೌರಕಾರ್ಮಿಕರನ್ನು ಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಇದೇ ವೇಳೆ ಮಾತನಾಡಿದ ಶಾಸಕ ರಾಮಲಿಂಗಾ ರೆಡ್ಡಿ ಅವರು ಸಂಕ್ರಾಂತಿ ಸಂತಸದ ಹಬ್ಬ, ಹೊಸ ವರ್ಷದ ಹೊಸ್ತಿಲಲ್ಲಿ ಬರುವ ಸಂಕ್ರಾಂತಿ ಸಂದರ್ಭದಲ್ಲಿ ಬೆಂಗಳೂರು ನಗರವನ್ನು ಸುಂದರ, ಸ್ವಚ್ಛವಾಗಿಟ್ಟುಕೊಳ್ಳಲು ನಿಮ್ಮ ಪಾತ್ರ ಅನನ್ಯ. ಸದಾ ಕಾಲ ಸ್ವಚ್ಛತೆ ಕೈಗೊಳ್ಳುವ ನಿಮಗೂ ಖುಷಿ ಸಿಗಬೇಕು ಎಂಬ ಕಾರಣದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶುಚಿತ್ವದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿಮ್ಮ ಸಹಕಾರ ಅಗತ್ಯ. ನಿಮ್ಮ ಸುರಕ್ಷತೆ, ಆರೋಗ್ಯ ರಕ್ಷಣೆಗಾಗಿ ಸರ್ಕಾರ ಮತ್ತು ಪಾಲಿಕೆ ಬದ್ಧವಾಗಿದೆ. ಹಳ್ಳಿಯ ನೆನಪು ತರುವ ಸಡಗರದ ಹಬ್ಬ ನಿಮ್ಮೆಲ್ಲರ ಬಾಳಿನಲ್ಲಿ ಬೆಳಕು ತರಲಿ ಎಂದು ಹಾರೈಸಿದರು.
ಪಾಲಿಕೆ ಸದಸ್ಯ ನಾಗರಾಜು ಮಾತನಾಡಿ, ಬಾಂಧವ ಸಂಸ್ಥೆಯಿಂದ ಪ್ರತಿವರ್ಷ ಸಂಕ್ರಾಂತಿ ಸಂಭ್ರಮ ಏರ್ಪಡಿಸಲಾಗುತ್ತಿದೆ. ಈ ಬಾರಿ ಜಯನಗರ ಕ್ಷೇತ್ರದ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಒಂದೇ ಕಡೆ ಸೇರಿರುವುದು ಉತ್ತಮ ಬೆಳವಣಿಗೆ.
ಇದರಿಂದ ಪರಸ್ಪರ ಬಾಂಧವ್ಯ ಬೆಳೆಯಲು ಸಹಕಾರಿಯಾಗುತ್ತದೆ ಎಂದರು. ಸುಗ್ಗಿ ಸಂಭ್ರಮದಲ್ಲಿ ಏಳು ವಾರ್ಡ್ ಗಳ ಸುಮಾರು ೫೦೦೦ ಜನ ಪೌರ ಕಾರ್ಮಿಕರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ಹೇಳಿದರು.
ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮತ್ತಿತರರು ಇದ್ದರು.

Leave a Comment