ಪೌರ ಕಾರ್ಮಿಕರಿಗೆ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಮನವಿ

ಬಳ್ಳಾರಿ,ಡಿ.07-ಪಾಲಿಕೆಯ ಪೌರ ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸಫಾಯಿ ಕರ್ಮಚಾರಿ ಸೇವಾ ಸಂಘದ ಪದಾಧಿಕಾರಿಗಳು ಇಂದು ನಗರದ ಸರಕಾರಿ ಅತಿಥಿ ಗೃಹದಲ್ಲಿ ನ್ಯಾಷನಲ್ ಸಫಾಯಿ ಕರ್ಮಚಾರಿ ಕಮಿಷನ್‍ನ ಜಗದೀಶ್ ಹಿರೇಮನಿ ಅವರಿಗೆ ಮನವಿ ಸಲ್ಲಿಸಿದರು.

ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಾಯಿಲೆಗಳು ಬಂದಲ್ಲಿ ಚಿಕಿತ್ಸೆ ಪಡೆಯಲು ಪೌರ ಕಾರ್ಮಿಕರ ಬಳಿ ಹಣ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ನೇರವಾಗಿ ಪಾಲಿಕೆ ವತಿಯಿಂದಲೇ ಚಿಕಿತ್ಸೆ ಪಡೆಯುವ ಆಸ್ಪತ್ರೆಗೆ ಹಣ ಪಾವತಿಸಬೇಕು. ಅಲ್ಲದೆ, ವಾಸ ಮಾಡಲು ಮನೆಗಳಿಲ್ಲದಿರುವುದರಿಂದ ಮನೆ ಸೌಕರ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ನಗರದಿಂದ ಸುಮಾರು 4 ಕಿ.ಮೀ.ದೂರದಲ್ಲಿದೆ. ಕಚೇರಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಬೇಕು. ಅಲ್ಲದೆ, ಸಫಾಯಿ ಕರ್ಮಚಾರಿಗಳ ಪ್ರತ್ಯೇಕ ಕಚೇರಿಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎನ್.ಪರಶುರಾಮ್, ಬಿ.ನಲ್ಲಣ್ಣ, ಉಪಾಧ್ಯಕ್ಷ ವೆಂಕಟೇಶಲು, ಪ್ರಧಾನ ಕಾರ್ಯದರ್ಶಿ ಕೆ.ಪೋಲಣ್ಣ, ಜಂಟಿ ಕಾರ್ಯದರ್ಶಿ ಗಿರಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment