ಪೌರ ಕಾರ್ಮಿಕರಿಗೆ ಕೂಡಲೇ ಮನೆಗಳ ಹಕ್ಕು ಪತ್ರ ನೀಡಿ

ಬಳ್ಳಾರಿ, ಡಿ.07- ರಾಜ್ಯದಲ್ಲಿ ಪೌರ ಕಾರ್ಮಿಕರಿಗೆ ನಿರ್ಮಿಸಿರುವ ಮೂರು ಸಾವಿರ ಮನೆಗಳ ವಾರಸುದಾರರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ಕಳೆದ 1973 ರಲ್ಲಿ ಸರಕಾರ ನಿರ್ಮಿಸಿಕೊಟ್ಟಿದ್ದ ಮನೆಗಳಿಗೆ 2018 ಬಂದರೂ ಸಹ ಅವರಿಗೆ ಮನೆ ಹಕ್ಕು ಪತ್ರ ನೀಡಿಲ್ಲ. ಅವು ಈಗ ಶಿಥಿಲವಾಸ್ಥೆಗೆ ಬಂದಿವೆ. ಅವುಗಳನ್ನು ರಿಪೇರಿ ಮಾಡಲು ಸರಕಾರ ಮುಂದಾಗುತ್ತಿಲ್ಲ. ಪೌರ ಕಾರ್ಮಿಕರು ದುರಸ್ತಿ ಮಾಡಿಕೊಳ್ಳಲು ಅವರ ಹೆಸರಿಗೆ ಯಾವುದೇ ದಾಖಲೆಗಳು ಇಲ್ಲ. ಇದರಿಂದ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೂಡಲೇ ರಾಜ್ಯ ಸರಕಾರ ಮನೆಗಳ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ 2016 ರಲ್ಲಿ ರಾಜ್ಯದಲ್ಲಿ 13000 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಸರಕಾರ ಆದೇಶ ನೀಡಿತ್ತು. ಆದರೆ, ಈವರೆಗೆ 6 – 7 ಜಿಲ್ಲೆ ಹೊರತು ಪಡಿಸಿದರೆ, ಬೇರೆ ಯಾವ ಜಿಲ್ಲೆಯಲ್ಲೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ನೇಮಕಾತಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ನೇಮಕಾತಿ ಡಿಸೆಂಬರ್ ಕೊನೆಯೊಳಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆ ಪದ್ಧತಿ ರದ್ದು ಮಾಡಬೇಕು ಎಂದು ಸರಕಾರದ ಆದೇಶ ಇದ್ದರೂ ಸಹ ಇನ್ನೂ ಗುತ್ತಿಗೆದಾರರಿಂದಲೇ ಪೌರ ಕಾರ್ಮಿಕರಿಗೆ ವೇತನ ನೀಡಲಾಗುತ್ತಿದೆ. ಈ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಪೌರ ಕಾರ್ಮಿಕರಿಗೆ ನಿಶ್ಚಿತ ಸಂಬಳ, ಆರೋಗ್ಯ ಕ್ಕೆ ಸಂಬಂಧಿಸಿದ ರಕ್ಷ ಕವಚ, ಸ್ವಂತ ಮನೆ, ಮಕ್ಕಳಿಗೆ ಶಿಕ್ಷಣ ಕೊಡುವ ಜವಾಬ್ದಾರಿ ಅಧಿಕಾರಿಗಳ ಮೇಲೆ ಇದೆ. ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಎಲ್ಲ ಸಮಸ್ಯಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸಿ, ಬಗೆಹರಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು

Leave a Comment