ಪೌರತ್ವ : ಸುಪ್ರೀಂ ಮೆಟ್ಟಿಲೇರಿದ ಕೇರಳ: ಜಾತ್ಯತೀತ ತತ್ವಗಳಿಗೆ ಧಕ್ಕೆ: ಅಸಂವಿಧಾನಿಕ ಎಂದು ಘೋಷಿಸಲು ಮನವಿ

ನವದೆಹಲಿ, ಜ. ೧೪- ಪೌರತ್ವ ತಿದ್ದುಪಡಿ ಕಾಯ್ದೆಯ ಕಿಚ್ಚು ದೇಶಾದ್ಯಂತ ಕಾವು ಮುಂದುವರೆದಿರುವಾಗಲೇ ಕಾಯ್ದೆಯನ್ನು ವಿರೋಧಿಸಿ ಸುಪ್ರೀಂಕೋರ್ಟ್ ಕದ ತಟ್ಟಿರುವ ಕೇರಳ ಸರ್ಕಾರ, ಪೌರತ್ವ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಅರ್ಜಿ ಸಲ್ಲಿಸಿದೆ.

  • ಪೌರತ್ವ ತಿದ್ದುಪಡಿ ಕಾಯ್ದೆಗೆ ಕೇರಳ ವಿರೋಧ.
  • ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮೊದಲ ರಾಜ್ಯ.
  • ಅಸಂವಿಧಾನಿಕ ಎಂದು ಘೋಷಿಸುವಂತೆ ಅರ್ಜಿ.
  • ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಾದ ಕಾಯ್ದೆ ಆರೋಪ.
  • ಆರ್‌ಎಸ್‌ಎಸ್ ಅಜಂಡವನ್ನು ಬಿಜೆಪಿ ಜಾರಿ ಮಾಡುವ ಹುನ್ನಾರ.
  • ಕೇರಳಕ್ಕೆ ಸುದೀರ್ಘ ಜಾತ್ಯತೀತ ಇತಿಹಾಸ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಈ ಕಾಯ್ದೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಮೊದಲ ರಾಜ್ಯ ಕೇರಳವಾಗಿದೆ. ಪೌರತ್ವ ಕಾಯ್ದೆ ಸಂವಿಧಾನದ ಕಲಂ 14ರ ಸಮಾನತೆ, ಕಲಂ 21ರ ಜೀವಿಸುವ ಹಕ್ಕು ಹಾಗೂ ಕಲಂ 25ರ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾದುದು. ಹೀಗಾಗಿ, ಇದನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಸಂಸತ್‌ನ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದು, 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಅದರ ಬಿಸಿ ಇನ್ನು ತಣ್ಣಗಾಗಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ ಕೇರಳ ಸರ್ಕಾರ, ಇದೀಗ ಅಸಂವಿಧಾನಿಕ ಎಂದು ಘೋಷಿಸುವಂತೆ ಒತ್ತಾಯಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಆರ್‌ಎಸ್‌ಎಸ್ ಅಜಂಡವನ್ನು ದೇಶದಲ್ಲಿ ಜಾರಿ ಮಾಡುವ ಮೂಲಕ ಕೋಮು ಭಾವನೆಯಲ್ಲಿ ಹೊಡೆದಾಳುವ ನೀತಿಯನ್ನು ಅನುಸರಿಸಲು ಮುಂದಾಗಿದೆ. ಇಂತಹ ಕಾಯ್ದೆಗೆ ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದು ಎಂದು ನ್ಯಾಯಾಲಯದ ಮೆಟ್ಟಿಲೇರಿದೆ.

ಕೇರಳದಲ್ಲಿ ಯಾವುದೇ ಕಾರಣಕ್ಕೂ ಬಂಧನ ಕೇಂದ್ರಗಳನ್ನು ತೆರೆಯುವುದಿಲ್ಲ. ಕೇರಳಕ್ಕೆ ಜಾತ್ಯತೀತತೆಯ ಸುದೀರ್ಘ ಇತಿಹಾಸವಿದೆ. ದೇವರ ನಾಡು ಎಂದು ಪ್ರಸಿದ್ಧವಾಗಿರುವ ಈ ನೆಲದಲ್ಲಿ, ಹಿಂದೂಗಳು, ಕ್ರಿಶ್ಚಿಯನ್ನರು, ಮುಸ್ಲಿಮರು ಆರಂಭದಿಂದಲೂ ಉತ್ತಮ ಸಹಭಾಳ್ವೆ ಹೊಂದಿದ್ದಾರೆ.ನಮ್ಮ ಸಂಸ್ಕೃತಿ-ಸಂಪ್ರದಾಯವನ್ನು ಕಾಯ್ದೆಯ ಹೆಸರಿನಲ್ಲಿ ಮಣ್ಣುಪಾಲು ಮಾಡಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುಡುಗಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದು ಸಮಾನತೆಯ ಅಂಶ ಸಾರುವ ಮೂಲಭೂತ ಹಕ್ಕಿಗೆ ವಿರುದ್ಧವಾದುದು. ಜಾತ್ಯತೀತ ತತ್ವಕ್ಕೂ ವಿರೋಧವಾದದ್ದು. ಯಾವುದೇ ಕಾರಣಕ್ಕೂ ಇಂತಹ ಕಾಯ್ದೆಯನ್ನು ದೇಶದಲ್ಲಿ ಜಾರಿ ಮಾಡಬಾರದು ಎಂದು ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳಿಗೆ ಪತ್ರ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಜತೆಗೆ ಅದನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೆ ತರದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕಾಯ್ದೆ ವಿರೋಧಿಸಿ ರಾಜಕೀಯ ಪಕ್ಷಗಳೂ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇದೇ ತಿಂಗಳ 22 ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

ಮೂಲ ಆಶಯಗಳಿಗೆ ಧಕ್ಕೆ
ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ಮೂಲ ಆಶಯಗಳಿಗೆ ಧಕ್ಕೆಯಾಗಿದೆ. ಸಂವಿಧಾನದ ಕಲಂ 14ರ ಸಮಾನತೆ, ಕಲಂ 21ರ ಜೀವಿಸುವ ಹಕ್ಕು ಹಾಗೂ ಕಲಂ 25ರ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾದುದು. ಹೀಗಾಗಿ, ಇದನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ.
– ಪಿಣರಾಯಿ ವಿಜಯನ್
ಕೇರಳ ಮುಖ್ಯಮಂತ್ರಿ

Leave a Comment