ಪೌರತ್ವ ಮಸೂದೆಗೆ ವಿರೋಧ; ಭಾರತ ರತ್ನ ನಿರಾಕರಿಸಿದ ಹಜಾರಿಕಾ ಕುಟುಂಬ

ನವದೆಹಲಿ, ಫೆ. ೧೨-ನಾಗರಿಕ ಪೌರತ್ವ ವಿರೋಧಿಸಿ ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಕೇಂದ್ರ ಸರ್ಕಾರ ಪ್ರಕಟಿಸಿರುವ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಗೌರವವನ್ನು ಹಜಾರಿಕಾ ಕುಟುಂಬ ನಿರಾಕರಿಸಿದೆ.

ಜನವರಿ ೨೬ರಂದು ಕೇಂದ್ರ ಸರ್ಕಾರ ಅಸ್ಸಾಮಿ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿತ್ತು. ಈಗ ಅತ್ಯುನ್ನತ ಪ್ರಶಸ್ತಿಯನ್ನು ತಿರಸ್ಕರಿಸಿರುವುದರಿಂದ ಫ್ರಧಾನಿ ನರೇಂದ್ರ ಮೋದಿಯವರಿಗೆ ಮುಖಭಂಗವಾಗಿದೆ.

ಈ ನಾಗರಿಕ ಪೌರತ್ವ ಮಸೂದೆ ಜಾರಿಯಾದರೆ ಡಿಸೆಂಬರ್ ೩೧, ೨೦೧೪ರಲ್ಲಿ ಆಪ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ದೇಶದೊಳಕ್ಕೆ ಪ್ರವೇಶಿಸಿರುವ ಅಲ್ಪಸಂಖ್ಯಾತರು ಭಾರತೀಯ ಪೌರತ್ವಕ್ಕೆ ಅರ್ಹರಾಗಿರುತ್ತಾರೆ. ಆದರೆ ಈ ಮಸೂದೆ ಅನುಷ್ಠಾನಕ್ಕೆ ಬಂದರೆ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೊರಾಂ ರಾಜ್ಯಗಳಲ್ಲಿ ಒಂದು ಕೋಟಿ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ನ್ಯೂಯಾರ್ಕ್ ಮೂಲದ ವಾಸಿಯಾಗಿರುವ ಭೂಪೇನ್ ಹಜಾರಿಕಾ ಪುತ್ರ, ತೇಜ್ ಹಜಾರಿಕಾ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನಾಗರಿಕ ಪೌರತ್ವ ಮಸೂದೆ ಅತ್ಯಂತ ನೋವಿನ ಸಂಗತಿಯಾಗಿದೆ. ಹೀಗಾಗಿ ಭಾರತ ರತ್ನ ಪ್ರಶಸ್ತಿಯನ್ನು ನಿರಾಕರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಭಾರತ ರತ್ನ ಪ್ರಶಸ್ತಿ ಸ್ವೀಕರಿಸುವಂತೆ ಕೇಂದ್ರ ಸರ್ಕಾರದಿಂದ ಇದುವರೆಗೂ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ. ಆದರೆ ಈ ಪ್ರಶಸ್ತಿಗಿಂತ ನಾಗರಿಕ ಪೌರತ್ವ ಮಸೂದೆ ತಮಗೆ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಮಸೂದೆ ಖಂಡಿಸಿ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಗುವಾಹಟಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಸೂದೆ ಈಶಾನ್ಯ ರಾಜ್ಯಗಳ ಜನರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳುವ ಮೂಲಕ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಮೋದಿಯವರಿಂದ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ತೇಜ್ ಹಜಾರಿಕಾ ಈ ಹೇಳಿಕೆ ನೀಡಿದ್ದಾರೆ.

Leave a Comment