ಪೌರತ್ವ ತಿದ್ದುಪಡಿ, ಎನ್‌ಆರ್‌ಸಿ ಐಕ್ಯತೆಗೆ ಮಾರಕ

ಮೋದಿ, ಶಾ ಏಕಪಕ್ಷೀಯ ನಿರ್ಧಾರ-ಜನ ಉತ್ತರ
ರಾಯಚೂರು.ಜ.17- ದೇಶದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾದ ಕೇಂದ್ರ ಸರಕಾರ ಭಾರತೀಯ ಐಕ್ಯತೆ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಜಾರಿಯ ಮೂಲಕ ಜನರಲ್ಲಿ ಗೊಂದಲ ಮೂಡಿಸಿ ದೇಶದ್ಯಂತ ಪ್ರತಿಭಟನೆ ನಡೆಯಲು ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಾತ್ಯಾತೀತ ದೇಶದ ಸ್ವರೂಪಕ್ಕೆ ಪೌರತ್ವ ಮತ್ತು ಎನ್‌ಆರ್‌ಸಿ ಮಾರಕವಾಗಿದೆ. ಧರ್ಮಾಧಾರಿತವಾಗಿ ಪೌರತ್ವ ತಿದ್ದುಪಡಿ ಜಾರಿ ದೇಶದ ಐಕ್ಯತೆ ಮತ್ತು ಶಾಂತಿ, ಸುವ್ಯವಸ್ಥೆಗೆ ಆತಂಕಕಾರಿಯಾಗಿದೆ. ಬಿಜೆಪಿ ಸರಕಾರ ಜನರನ್ನು ತಪ್ಪು ದಾರಿಗೆ ಎಳೆಯುವ ಮೂಲಕ ಗೊಂದಲ ಸೃಷ್ಟಿಸಿ ರಾಜಕೀಯ ಬೇಳೆ ಬೆಳೆಸಿಕೊಳ್ಳುವ ನಾಟಕ ಪ್ರದರ್ಶಿಸುತ್ತಿದೆ. ಆದರೆ ಈ ದೇಶದ ಜನ ಇಂತಹ ನಾಟಕಗಳಿಗೆ ಎಂದೂ ಬಲಿಯಾಗುವುದಿಲ್ಲ.
ರಾಜ್ಯ ಮತ್ತು ದೇಶದ್ಯಂತ ಉದ್ಧಗಲಕ್ಕೂ ಬೃಹತ್ ಪ್ರತಿಭಟನೆ ಮೂಲಕ ಎನ್‌ಆರ್‌ಸಿ ಮೂಲಕ ತಮ್ಮ ಆಕ್ರೋಶವನ್ನು ಪ್ರದರ್ಶಿಸುತ್ತಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದಾಳಿ ಮತ್ತು ಪೌರತ್ವ ತಿದ್ದುಪಡಿ ಪರವಾಗಿ ಬಿಜೆಪಿ ನಡೆಸುತ್ತಿರುವ ಮೆರವಣಿಗೆಗಳು ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಬಿಜೆಪಿ ಭಯಭೀತಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಕಾಂಗ್ರೆಸ್ ಮುಕ್ತ ಭಾರತದ ಹೇಳಿಕೆ ನೀಡುವ ಬಿಜೆಪಿ ಪದೇ-ಪದೇ ಕಾಂಗ್ರೆಸ್ ಮೇಲೆ ಮಾತಿನ ದಾಳಿ ನಡೆಸುತ್ತಿರುವುದು ಏಕೆ?. ಕಾಂಗ್ರೆಸ್ ಬಗ್ಗೆ ಬಿಜೆಪಿಯವರಿಗೆ ಆತಂಕ ಆರಂಭಗೊಂಡಿದೆ ಎನ್ನುವುದಕ್ಕೆ ಇದು ಸೂಚಕವಾಗಿದೆ. ಪೌರತ್ವ ವಿರುದ್ಧದ ಚಳುವಳಿ ಬಿಜೆಪಿ ಮುಕ್ತ ಭಾರತ ಮಾಡುವ ಪ್ರಕ್ರಿಯೆಗೆ ನಾಂದಿಯಾಗಿದೆ. ಇತ್ತೀಚಿಗೆ ನಗರದಲ್ಲಿ ಬಿಜೆಪಿಯ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಡ್ರಾಮಾ ಮಾಡುತ್ತಿದೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರ ದೇಶದ ಜನ ಯಾರು ಡ್ರಾಮಾ ಮಾಡುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತಿದ್ದಾರೆ.
ದೇಶದಲ್ಲಿ ಆರ್ಥಿಕ ಮುಗ್ಗಟ್ಟು ತೀವ್ರಗೊಂಡಿದೆ. ಡಾಲರ್ ಬೆಲೆ ಕುಸಿತದಿಂದ ಪೆಟ್ರೋಲ್, ಡಿಸೆಲ್ ಮತ್ತಿತ್ತರ ವಿದೇಶಿ ಆಮದು ವಸ್ತುಗಳ ಬೆಲೆ ಗಗನಕ್ಕೇರಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಡಿಪಿ ಶೇ. 4 ಕ್ಕೆ ಕುಸಿದು ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕಾದ ಕೇಂದ್ರ ಸರಕಾರ ಮರೆತಿದೆ.
ಆರ್ಥಿಕ ತಜ್ಞರೊಂದಿಗೆ ಪೂರ್ವಾಪರ ಆಲೋಚಿಸದೆ ನೋಟು ಅಮಾನೀಕರಣಗೊಳಿಸುವ ಮೂಲಕ ಮೋದಿಯವರು ಮಾಡಿದ ತಪ್ಪಿನಿಂದಾಗಿ ದೇಶ ಇಂದು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವಂತೆ ಮಾಡಿದೆ. ಆರ್ಥಿಕ ಚೇತರಿಕೆಗೆ ಕ್ರಮ ಕೈಗೊಳ್ಳಬೇಕಾದ ಸರಕಾರ ಪೌರತ್ವ ತಿದ್ದುಪಡಿ, ಎನ್‌ಆರ್‌ಸಿಗಳನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ ದೇಶದ ಶಾಂತಿ, ಭದ್ರತೆಗೆ ಆತಂಕಕಾರಿ ವಾತಾವರಣಕ್ಕೆ ದಾರಿ ಮಾಡಿದ್ದಾರೆ.
ಕಾಶ್ಮೀರಕ್ಕೆ 370 ವಿಶೇಷ ಸ್ಥಾನಮಾನ ರದ್ದುಪಡಿಸಿ ಅದರ ರಾಜಕೀಯ ಲಾಭ ಪಡೆಯುವ ಬಿಜೆಪಿ ಪ್ರಯತ್ನಕ್ಕೆ ದೇಶದಲ್ಲಿ ಭಾರಿ ತಿರುಗೇಟು ನೀಡಲಾಗಿದೆ. ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಯ ಸೋಲು ಅವರ ತಪ್ಪು ನಿರ್ಧಾರಗಳಿಗೆ ಜನ ಕೊಟ್ಟ ಉತ್ತರವಾಗಿದೆ. 130 ಕೋಟಿ ಜನ ಸಮುದಾಯದ ಈ ದೇಶದ ಸಾಮಾಜಿಕ ಸಾರ್ವಭೌಮತೆ ಮತ್ತು ಜಾತ್ಯತೀತ ಸ್ವರೂಪವನ್ನು ರಕ್ಷಿಸುವುದಾಗಿ ಪ್ರಮಾಣ ಸ್ವೀಕರಿಸಿದ ಬಿಜೆಪಿ ಸಂವಿಧಾನದ ಮೂಲ ಆಶಯಕ್ಕೆ ಭಂಗ ಬರುವ ರೀತಿಯಲ್ಲಿ ವರ್ತಿಸುತ್ತಿದೆ.
ಬಿಜೆಪಿಯ ಮಿತ್ರ ಪಕ್ಷಗಳು ಮತ್ತು ಅವರದೆ ಸರಕಾರದ ಪಾಲುದಾರಿಕೆ ರಾಜ್ಯಗಳಲ್ಲಿ ಪೌರತ್ವ ಮತ್ತು ಎನ್‌ಆರ್‌ಸಿ ಅನುಷ್ಠಾನಕ್ಕೆ ವಿರುದ್ಧ ವ್ಯಕ್ತಗೊಂಡಿವೆ. ಪೌರತ್ವ ದೇಶದ ಹಿತಕ್ಕೆ ಪೂರಕವಾಗಿದ್ದರೆ, ಅವರದೆ ಸರಕಾರಗಳಿರುವ ರಾಜ್ಯಗಳಲ್ಲಿ ಇದರ ಅನುಷ್ಠಾನಕ್ಕೆ ವಿರುದ್ಧ ವ್ಯಕ್ತಗೊಂಡಿವುದಾದರೂ ಏಕೆ? ಎನ್ನುವುದನ್ನು ಪ್ರಶ್ನಿಸಿದ ಅವರು ಸ್ವಂತ ಪಕ್ಷದವರೆ ಬಿಜೆಪಿಯ ಪೌರತ್ವ ತಿದ್ದುಪಡಿ ಎನ್‌ಆರ್‌ಸಿಗೆ ವಿರೋಧವಾಗಿವೆ.
ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ಇವರು ಜನರನ್ನು ದಾರಿ ತಪ್ಪಿಸುವುದನ್ನು ಬಿಟ್ಟು ದೇಶದ ಬಾಧಿಸುತ್ತಿರುವ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಸಮಸ್ಯೆ, ಬೆಲೆಯೇರಿಕೆ ಹಾಗೂ ಇನ್ನಿತರ ಸಮಸ್ಯೆಗಳ ನಿವಾರಿಸುವಲ್ಲಿ ಕ್ರಮ ಕೈಗೊಂಡು ದೇಶ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ಇರಬಗೇರಾ, ಜಯಣ್ಣ, ಬಸವರಾಜ ರೆಡ್ಡಿ, ಕೆ.ಶಾಂತಪ್ಪ, ಅಬ್ದುಲ್ ಕರೀಂ, ಶಿವಮೂರ್ತಿ, ರುದ್ರಪ್ಪ ಅಂಗಡಿ, ತಾಯಣ್ಣ ನಾಯಕ ಉಪಸ್ಥಿತರಿದ್ದರು.

Leave a Comment