ಪೌರತ್ವ ತಡೆಗೆ ಸುಪ್ರೀಂ ನಿರಾಕರಣೆ

ನವದೆಹಲಿ, ಜ. ೨೨- ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ 4 ವಾರಗಳೊಳಗಾಗಿ ವಿವರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಇಂದಿಲ್ಲಿ ಸೂಚನೆ ನೀಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಜತೆಗೆ ಈ ಕಾಯ್ದೆಗೆ ಸಾಂವಿಧಾನಿಕ ಸ್ಥಾನಮಾನ ನೀಡುವ ಅರ್ಜಿಗಳು ಸೇರಿದಂತೆ 140 ಕ್ಕೂ ಅಧಿಕ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.

ಇಂದು ಬೆಳಗ್ಗೆ ಎಲ್ಲ ವಿಚಾರಣೆಗಳ ಅರ್ಜಿಯನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಸಿಎಎ ವಿರೋಧಿ ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಅಲ್ಲದೆ, ಸಿಎಎ ಮತ್ತು ಏಪ್ರಿಲ್‌ನಿಂದ ಆರಂಭವಾಗಲಿರುವ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಎನ್‌‌ಪಿಆರ್ ಪ್ರಕ್ರಿಯೆಯನ್ನು ಮುಂದೂಡುವ ಸಂಬಂಧ ಮಧ್ಯಂತರ ಆದೇಶ ನೀಡಬೇಕು ಎಂದು ಮುಖ್ಯ ನ್ಯಾ. ಎಸ್.ಎ. ಬೋಬಡೆ, ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ಸಂಜೀವ್‌ಖನ್ನಾ ನೇತೃತ್ವದ ಪೀಠದ ಮುಂದೆ ತಮ್ಮ ವಾದ ಮಂಡಿಸಿದರು.

ಇದಕ್ಕೆ ಪೂರಕವಾಗಿ ಮತ್ತೊಬ್ಬ ವಕೀಲ ಅಭಿಷೇಕ್ ಮನೋಜ್‌ಸಿಂಗ್ವಿ ಅವರು ಕೂಡಾ ಪ್ರಕರಣದ ಸಂಬಂಧ ತಡೆ ಕೋರುವಂತೆ ಮನವಿ ಮಾಡಿದರು. ಕೇಂದ್ರ ಸರ್ಕಾರದ ಪರ ವಕೀಲ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಆಕ್ಷೇಪ ವ್ಯಕ್ತಪಡಿಸಿ, ಸಿಎಎ ಅಥವಾ ಎನ್‌ಪಿಆರ್ ಮುಂದೂಡುವುದು ಪ್ರಕರಣಕ್ಕೆ ತಡೆ ನೀಡಿದಷ್ಟೇ ಸಮ. ಹೀಗಾಗಿ ಯಾವುದೇ ಕಾರಣಕ್ಕೂ ಮಧ್ಯಂತರ ಆದೇಶ ಹೊರಡಿಸಬೇಡಿ. ತಡೆಯೂ ನೀಡಬೇಡಿ. ಕೇಂದ್ರ ಸರ್ಕಾರದ ಅಭಿಪ್ರಾಯ ಆಲಿಸುವ ತನಕ ಯಾವುದೇ ನಿರ್ಧಾರಕ್ಕೆ ಬಾರದಂತೆ ನ್ಯಾಯಪೀಠದ ಗಮನಕ್ಕೆ ತಂದರು.

ವಾದ ಪ್ರತಿವಾದವನ್ನು ಆಲಿಸಿದ ಮುಖ್ಯ ನ್ಯಾ. ಬೋಬಡೆ ನೇತೃತ್ವದ ನ್ಯಾಯಪೀಠ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿ ಈ ಸಂಬಂಧ ಕೇಂದ್ರ ಸರ್ಕಾರ ನಾಲ್ಕು ವಾರಗಳೊಳಗಾಗಿ ವಿವರ ನೀಡುವಂತೆ ಸೂಚಿಸಿ ಸಾಂವಿಧಾನಿಕ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿದೆ.

ಕೇಂದ್ರ ಸರ್ಕಾರ ಸಂಸತ್ ಉಭಯ ಸದನಗಳಲ್ಲಿ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹಲವು ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಕಳೆದ ಡಿಸೆಂಬರ್ 2018 ರಂದು ಮೊದಲ ವಿಚಾರಣೆ ನಡೆದಿತ್ತು. ಇಂದು ನಡೆದ ವಿಚಾರಣೆ ಸಂದರ್ಭದಲ್ಲಿ 140 ಕ್ಕೂ ಹೆಚ್ಚು ಅರ್ಜಿಗಳ ಪೈಕಿ 60 ಅರ್ಜಿಗಳಷ್ಟೇ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವಂತಹದ್ದು ಹೀಗಾಗಿ ಕೇಂದ್ರದ ಅಭಿಪ್ರಾಯವನ್ನು ಆಲಿಸಬೇಕು ಎಂದು ವೇಣುಗೋಪಾಲ್ ಮನವಿ ಮಾಡಿದರು.

ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದ ಆವರಣದಲ್ಲಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಅರ್ಜಿದಾರರ ಪರ ವಕೀಲರಲ್ಲದೆ, ಇತರೆ ವಕೀಲರು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದರು.

* ಸಿಎಎಗೆ ತಡೆ ನೀಡಲು ಸುಪ್ರೀಂ ನಿರಾಕರಣೆ
* ಸಾಂವಿಧಾನಿಕ ಪೀಠಕ್ಕೆ ವಿಚಾರಣೆ ವರ್ಗಾವಣೆ
* 4 ವಾರಗಳಲ್ಲಿ ವಿವರ ನೀಡುವಂತೆ ಕೇಂದ್ರಕ್ಕೆ ಸೂಚನೆ
* ಅರ್ಜಿದಾರರ ಪರ ಕಪಿಲ್ ಸಿಬಲ್, ಅಭಿಷೇಕ್ ಮನೋಸಿಂಗ್ವಿ ವಾದ
* ಕೇಂದ್ರ ಸರ್ಕಾರದ ಪರ ಕೆ.ಕೆ. ವೇಣುಗೋಪಾಲ್ ಪ್ರತಿವಾದ
* ಮುಖ್ಯ ನ್ಯಾ. ಬೋಬಡೆ ಪೀಠದಲ್ಲಿ ವಿಚಾರಣೆ

Leave a Comment