ಪೌರತ್ವ ಕಾಯ್ದೆ : ಅಲ್ಪಸಂಖ್ಯಾತರಿಗೆ ಆತಂಕ ಬೇಡ

ರಾಯಚೂರು.ಜ.20- ಪೌರತ್ವ ಕಾಯ್ದೆಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ಧಕ್ಕೆಯಿಲ್ಲ. ಈ ಹಿನ್ನೆಲೆಯಲ್ಲಿ ಯಾರು ಆತಂಕಕ್ಕೊಳಗಾಗದಿರುವಂತೆ ಶಾಸಕ ಎ.ಎಸ್.ನಡಹಳ್ಳಿ ಅವರು ಹೇಳಿದರು.
ಅವರಿಂದು ಭಾರತೀಯ ಜನತಾ ಪಕ್ಷದ ಪೌರತ್ವ ಪರ ಬೃಹತ್ ಮೆರವಣಿಗೆ ಉದ್ದೇಶಿಸಿ ಮಾತನಾಡಿದರು. ಭಾರತ ಸರ್ವಧರ್ಮಗಳ ಸಂಗಮವಾಗಿದೆ. ಪೌರತ್ವದ ಬಗ್ಗೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ನೀಡುತ್ತಿದೆ. ಇದಕ್ಕೆ ಅಲ್ಪಸಂಖ್ಯಾತರು ಕಿವಿಗೋಡದೇ, ಪೌರತ್ವದ ಸತ್ಯಾಸತ್ಯತೆ ಪರಿಶೀಲಿಸಬೇಕು. ಈ ಕಾಯ್ದೆ ಅನುಷ್ಠಾನದಿಂದ ಯಾವುದೇ ಸಮುದಾಯಗಳಿಗೆ ಸಮಸ್ಯೆ ಇಲ್ಲವೆಂದು ಸ್ಪಷ್ಟಪಡಿಸಿದರು.
ಬಾಂಗ್ಲಾ, ಪಾಕಿಸ್ತಾನ, ಅಫಘ್ಟಾನಿಸ್ತಾನ ದೇಶದಿಂದ ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂಗಳು ಭಾರೀ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ. ಇವರಿಗೆ ಪೌರತ್ವ ನೀಡುವ ಉದ್ದೇಶ ಈ ತಿದ್ದುಪಡಿ ಕಾಯ್ದೆ ಒಳಗೊಂಡಿದೆ. ಎಲ್ಲಿಯೂ ಸಹ ಮತ್ತೊಂದು ಧರ್ಮದ ವಿರುದ್ಧ ಈ ಕಾಯ್ದೆಯನ್ನು ತರಲಾಗಿಲ್ಲವೆಂದು ವಿವರಿಸಿದರು. ಸಭೆಯ ಪೂರ್ವ ಜೈರುದ್ದೀನ್ ಪಾಷಾ ವೃತ್ತದಿಂದ ಬೃಹತ್ ಮೆರವಣಿಗೆ ನಡೆಸಲಾಯಿತು.
ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಮುಖಂಡರು, ಕಾರ್ಯಕರ್ತರು ಸಾರ್ವಜನಿಕರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಯುವ ಬಿಗ್ರೇಡ್ ವೀರ್ ಸಾವರ್ಕರ್ ಯೂತ್ ಅಸೋಸಿಯೇಷನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯುವಕರು ಪಾಲ್ಗೊಂಡಿದ್ದರು. ಈ ಮೆರವಣಿಗೆ ನೇತೃತ್ವ ಶಾಸಕ ಕೆ.ಶಿವನಗೌಡ ನಾಯಕ ಅವರು ವಹಿಸಿದ್ದರು. ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಮುಖಂಡರಾದ ತ್ರಿವಿಕ್ರಮ ಜೋಷಿ, ತಾ.ಪಂ.ಅಧ್ಯಕ್ಷ ಹನುಮಂತ ಕಟ್ಟಿಮನಿ, ಅಶೋಕ ಗಸ್ತಿ, ಪ್ರಕಾಶ ಪಾಟೀಲ್, ನಾಗರಾಜ ಅಕ್ಕರಕಿ, ಜಂಬಣ್ಣ ನಿಲೋಗಲ್, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದರಲ್ಲಿ ಪಾಲ್ಗೊಂಡಿದ್ದರು.

Leave a Comment