ಪೌರತ್ವ, ಎನ್ಆರ್‌ಸಿ – ಹಿಂದೂ ರಾಷ್ಟ್ರ ಅಸಾಧ್ಯ

ಬಿಜೆಪಿಗೆ ಇತ್ತೀಚಿನ 9 ಚುನಾವಣೆಗಳಲ್ಲೂ ಸೋಲು
ರಾಯಚೂರು.ಫೆ.13- ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್‌ಸಿ ಮೂಲಕ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲವೆನ್ನುವುದನ್ನು ದೆಹಲಿಯ ಮತದಾರರು ಸಾಬೀತು ಪಡಿಸಿದ್ದಾರೆಂದು ಜಾದಳದ ರಾಷ್ಟ್ರೀಯಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹೇಳಿದರು.
ಅವರಿಂದು ಖಾಸಗಿ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕುತಂತ್ರಕ್ಕೆ ಇಲ್ಲಿಯ ಜನ ಎಂದೂ ಸ್ಪಂದಿಸುವುದಿಲ್ಲ. ಇದಕ್ಕೆ ದೆಹಲಿ ಚುನಾವಣೆ ಫಲಿತಾಂಶ ಸ್ಪಷ್ಟ ಉತ್ತರವಾಗಿದೆ. ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮೋದಿ ಅವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿನೊಂದಿಗೆ ಜಾತ್ಯತೀತ ಗುಂಪು ಒಗ್ಗೂಡಿಸುವ ಪ್ರಯತ್ನ ಮಾಡುವ ಅಗತ್ಯವಿದ್ದು, ಈ ದಿಕ್ಕಿನಲ್ಲಿ ನನ್ನ ಪ್ರಯತ್ನ ತೀವ್ರವಾಗಿದೆಂದರು.
ರಾಷ್ಟ್ರೀಯ ಪಕ್ಷವೆಂದೇ ಗುರುತಿಸಿಕೊಂಡ ಕಾಂಗ್ರೆಸ್ ದೆಹಲಿ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಸೋತಿದೆ. ಮುಂಬರುವ ದಿನಗಳಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಕಷ್ಟಕರ. ದೇಶದಲ್ಲಿ ಇತ್ತೀಚಿಗೆ ನಡೆದ 9 ಚುನಾವಣೆಗಳಲ್ಲಿ ಬಿಜೆಪಿ ಪರಾಭವಗೊಂಡಿದೆ. ದೆಹಲಿಯಲ್ಲಿ ಶೇಕಡವಾರು ಮತಗಳು ಕುಸಿದಿವೆ. ಕಾಂಗ್ರೆಸ್ 40 ಸ್ಟಾರ್ ಪ್ರಚಾರಕರನ್ನೂ ಹೊಂದಿದ್ದರೂ ಶೂನ್ಯ ಸಾಧನೆ ಮಾಡಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆಂದು ಸ್ವತಃ ಬಿಜೆಪಿಯ ನಾಯಕರೇ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರ ಸರ್ಕಾರ ಮೂರು ವರ್ಷಗಳ ಕಾಲ ಅಧಿಕಾರ ನಿರ್ವಹಿಸಲಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಅತೋಟಿಗೆ ತರುವುದು ಕಷ್ಟಸಾಧ್ಯವೆಂದು ಅವರೇ ಹೇಳಿಕೊಂಡಿದ್ದಾರೆ. ಮೈತ್ರಿ ಸರ್ಕಾರ ರಚನೆಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿನ ಮೈತ್ರಿಗೆ ನಾವೇನು ಮೇಲೆ ಬಿದ್ದು ಹೋಗಿರಲಿಲ್ಲ. ಮೈತ್ರಿ ಸರ್ಕಾರ ಬೀಳಲು ಯಾರು ಕಾರಣ ಎನ್ನುವುದು ಎಲ್ಲಾರಿಗೂ ಗೊತ್ತಿದೆ.
ಜಾದಳ ಪಕ್ಷದ ಶಕ್ತಿ ವೃದ್ಧಿಸಲು ನಾನು ಪ್ರಯತ್ನಿಸುವುದಾಗಿ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಗುಲಾಮ ನಬೀ ಆಜಾದ್ ಅವರಿಗೆ ಹೇಳಿದ್ದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಂದಿಗೆ ಹೊಂದಾಣಿಕೆ ಅಸಾಧ್ಯ. ಬಡ್ತಿ ಮೀಸಲಾತಿ ಸಂವಿಧಾನದ ಹಕ್ಕಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿಕೆ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. ಸರೋಜಿ ಮಹಿಷಿ ವರದಿ ಜಾರಿಗೆ ಸಂಬಂಧಿಸಿ ಆಸಕ್ತಿ ವಹಿಸಿ, ಭಾಗವಹಿಸುತ್ತೇನೆ. ಆದರೆ, ಎಲ್ಲದಕ್ಕೂ ಬಂದ್ ಅಗತ್ಯವಿಲ್ಲವೆಂದರು.
ಮುಂಬರುವ ಜ. 8 ರಂದು ನನ್ನ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ. ಸೋಲು-ಗೆಲುವುಗಳಿಗೆ ಹಿಗ್ಗದೇ, ಕುಗ್ಗದೇ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಮುಂದುವರೆಯುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶರವಣ, ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಮಹಾಂತೇಶ ಪಾಟೀಲ್, ಯೂಸೂಫ್ ಖಾನ್, ಕರಿಯಮ್ಮ, ರವಿ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment