ಪೊಲೀಸ್ ಮೇಲೆ ಹಲ್ಲೆ ಆರೋಪಿಗೆ ಗುಂಡೇಟು

ಬೆಂಗಳೂರು, ಮಾ.೨೬. ಸಂಜಯನಗರದಲ್ಲಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಾರ್ವತ್ರಿಕ ಟೀಕೆಗೆ ಗುರಿಯಾಗಿದ್ದ ದುಷ್ಕರ್ಮಿಯ ಕಾಲಿಗೆ ಗುಂಡು ಹೊಡೆದು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಎಡಗಾಲಿಗೆ ಗಾಯಗೊಂಡಿರುವ ಭೂಪಸಂದ್ರದ ತಾಜುದ್ದೀನ್(೨೫)ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಇದೇ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ತಾಜುದ್ದೀನ್ ಜೊತೆಯಲ್ಲಿದ್ದ ೯ ಮಂದಿಯನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

ಸಂಜಯನಗರದ ಭೂಪಸಂದ್ರದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಲಾಕ್‌ಡೌನ್ ಉಲ್ಲಂಘಿಸಿ ಮನೆಯಿಂದ ಹೊರಬರುತ್ತಿದ್ದವರನ್ನು ಪ್ರಶ್ನಿಸಿ ಬುದ್ದಿ ಹೇಳಿ ಕಳುಹಿಸುತ್ತಿದ್ದಾಗ ತಾಜುದ್ದೀನ್ ಸೇರಿ ೧೦ ಮಂದಿ ಹಲ್ಲೆ ನಡೆಸಿದ್ದರು.

ಆರೋಪಿ ತಾಜುದ್ದೀನ್ ಸೇರಿ ೧೦ ಮಂದಿ ಸಂಜಯನಗರದಲ್ಲಿ ನಿನ್ನೆ ಗಸ್ತು ತಿರುಗುತ್ತಿದ್ದಾಗ ಇಬ್ಬರು ಪೊಲೀಸ್ ಪೇದೆಗಳ ಹಲ್ಲೆ ಮಾಡಿದ್ದು ಕೂಡಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಸಿ ಆರೋಪಿಯನ್ನು ಬಂಧಿಸಿದ್ದರು.

ರಾತ್ರಿ ಸ್ಥಳ ಮಹಜರು ಮಾಡಲು ಇಂದು ಬೆಳಿಗ್ಗೆ ೬.೨೦ರ ವೇಳೆ ಸ್ಥಳಕ್ಕೆ ಆರೋಪಿಯನ್ನು ಕರೆದುಕೊಂಡು ಹೋದಾಗ ಮತ್ತೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರೂಪಾ ಹಾಗೂ ಮುಖ್ಯಪೇದೆ ಮಂಜಣ್ಣ ಅವರ ಮೇಲೆ ಕಲ್ಲು ಎಸೆದು ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ ಶರಣಾಗುವಂತೆ ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾಜಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಮನವಿ ಮಾಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಗುಂಡು ಹಾರಿಸಿದ್ದು ಅದು ಆತನ ಎಡಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್‌ಐ ರೂಪಾ ಹಾಗೂ ಮಂಜಣ್ಣ ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದರು.

Leave a Comment