ಪೊಲೀಸ್ ಬಿಗಿ ಭದ್ರತೆ ನಡುವೆ ಟಿಪ್ಪು ಜಯಂತಿ ಆಚರಣೆ

ಕಲಬುರಗಿ,ನ.10-ಪೊಲೀಸ್ ಬಿಗಿ ಬಂದೋಬಸ್ತ್ ನುಡುವೆ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿಂದು ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಯಿತು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.
ರಂಗಮಂದಿರದ ಸುತ್ತಲು ಪೊಲೀಸರು ಜಮಾಯಿಸಿದ್ದರು. ರಂಗಮಂದಿರದೊಳಗೆ ಪ್ರವೇಶಿಸುವ ಪ್ರತಿಯೊಬ್ಬರನ್ನು ಪೊಲೀಸರು ತಪಾಸಣೆ ಮಾಡಿಯೇ
ಒಳಬಿಟ್ಟರು. ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿತ್ತು. ರಂಗಮಂದಿರದ ಮುಖ್ಯದ್ವಾರದಲ್ಲಿಯೇ ತಪಾಸಣೆ ನಡೆಸಿ ಜನರನ್ನು ರಂಗಮಂದಿರದೊಳಗೆ ಬಿಡುತ್ತಿದ್ದುದ್ದು ಕಂಡುಬಂತು.
@12bc = ಟಿಪ್ಪು ಅಪ್ರತಿಮ ದೇಶಭಕ್ತ
ಹಜರತ್ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಸಮಾರಂಭ ಉದ್ಘಾಟಿಸಿದರು.
ಟಿಪ್ಪು ಸುಲ್ತಾನ್ ದೇಶಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ. ಅಪ್ರತಿಮ ದೇಶಭಕ್ತ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ್ದೇ ಟಿಪ್ಪು ಸುಲ್ತಾನ್ ಎಂದು ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮತ್ತು ಟಿಪ್ಪು ಸುಲ್ತಾನ್ ಬ್ರಿಟಿಷರೊಂದಿಗೆ ರಾಜಿರಹಿತ ಹೋರಾಟ ನಡೆಸಿದ ಪ್ರಮುಖರು. ಟಿಪ್ಪು ಸುಲ್ತಾನ ನಾಡಿನ ಹೆಮ್ಮೆಯ ಪುತ್ರ, ಈ ಮಣ್ಣಿನ ಮಗ, ಸ್ವಾಭಿಮಾನದ ಸಂಕೇತ. ಅವರ ತ್ಯಾಗ, ಬಲಿದಾನ ಅವಿಸ್ಮರಣೀಯವಾದದ್ದು ಎಂದರು.
ಟಿಪ್ಪು ಸುಲ್ತಾನ್ ಅವರ ಧೈರ್ಯ ಮತ್ತು ಶೌರ್ಯ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಅವರ ಕೆಚ್ಚೆದೆಯ ಕಥೆಗಳನ್ನು ಯುವಕರಿಗೆ ತಿಳಿಸಬೇಕಾಗಿದೆ ಎಂದ ಅವರು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿದ ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ಶರಣಾಗಲಿಲ್ಲ ಅವರ ಧೈರ್ಯ ಮತ್ತು ಶೌರ್ಯ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದರು.
ಸತ್ಯ, ಅಹಿಂಸೆ ಮತ್ತು ಸಾಮರಸ್ಯದ ನಾಡು ಕಟ್ಟುವ ಕನಸು ಟಿಪ್ಪು ಸುಲ್ತಾನ್ ಕಂಡಿದ್ದರು. ನಾವೆಲ್ಲರು ಇಂದು ಸತ್ಯ, ಅಹಿಂಸೆ ಮತ್ತು ಸಾಮರಸ್ಯದ ನಾಡು ಕಟ್ಟಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.
ಖಾಜಾ ಬಂದೇನವಾಜ್ ದರ್ಗಾದ ಡಾ.ಸೈಯದ್ ಶಹಾ ಖುಸ್ರೋ ಹುಸೇನಿ ಸಾನಿಧ್ಯವಹಿಸಿದ್ದರು. ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಜಗರ ಚುಲಬುಲ್, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ಮತ್ತು ಖಮರುಲ್ ಇಸ್ಲಾಂ ಅವರ ಪುತ್ರ ವೇದಿಕೆ ಮೇಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಮೊಹ್ಮದ್ ಅಜಮದ್ ಜಾವೀದ್ ಟಿಪ್ಪು ಸುಲ್ತಾನ್ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಹೊರತಂದ ಟಿಪ್ಪು ಸುಲ್ತಾನ್ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.

Leave a Comment