ಪೊಲೀಸ್ ಬಂದೋಬಸ್ತ್ : 39 ಎಕರೆ 22 ಗುಂಟೆ ಸಮೀಕ್ಷೆ

ಸಿಯಾತಲಾಬ್ ಪ್ರದೇಶ ಸರ್ವೆ ನಂ 33/1ರ ನಿವಾಸಿಗಳಿಗೆ ತಳಮಳ
ರಾಯಚೂರು.ಡಿ.03- ನಗರದ ಹೃದಯ ಭಾಗದಲ್ಲಿರುವ ಸಿಯಾತಲಾಬ್ ಬಡಾವಣೆಯ ಸರ್ವೆ ನಂ.33/1 ರಲ್ಲಿರುವ 39 ಎಕರೆ 22 ಗುಂಟೆ ಜಮೀನು ಸರ್ವೆ ಕಾರ್ಯ ನಗರದಲ್ಲಿ ಸಂಚಲನ ಮೂಡಿಸಿದೆ.
ಉದ್ದೇಶಿತ ಜಮೀನು ಸರ್ಕಾರಕ್ಕೆ ಸೇರಿದ್ದೆಂದು ದಾಖಲೆಯಲ್ಲಿರುವುದರಿಂದ ಈ ಜಮೀನು ಸಮೀಕ್ಷೆ ಕಾರ್ಯಕ್ಕೆ ನ್ಯಾಯಾಲಯ ನೀಡಿದ ಸೂಚನೆ ಮೇರೆಗೆ ಜಿಲ್ಲಾಡಳಿತ, ನಗರಸಭೆ ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕಾರ್ಯ ಕೈಗೊಂಡರು. ಪೊಲೀಸರ ನೆರವಿನೊಂದಿಗೆ ಸರ್ವೆ ಕಾರ್ಯ ಆರಂಭಿಸಲಾಯಿತು. 39 ಎಕರೆ 22 ಗುಂಟೆ ಜಮೀನಲ್ಲಿ ವಸತಿ ಮತ್ತು ವಾಣಿಜ್ಯೋದ್ಯಮ ಕಟ್ಟಡ ನಿರ್ಮಿಲಾಗಿದೆ. ಗೋಶಾಲೆಯಿಂದ ಚಂದ್ರಮೌಳೇಶ್ವರ ರಸ್ತೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಒಂದಷ್ಟು ಜಮೀನು ಖಾಲಿ ಉಳಿದಿದೆ.
ಈ ಜಮೀನಿಗೆ ಸಂಬಂಧಿಸಿ ಬಂದ ದೂರುಗಳ ಹಿನ್ನೆಲೆಯಲ್ಲಿ ನ್ಯಾಯಾಲಯಲ್ಲಿ ದಾವೆ ಹೂಡಲಾಗಿತ್ತು. ಇತ್ತೀಚಿಗೆ ನ್ಯಾಯಾಲಯ ಈ ಜಮೀನಿಗೆ ಸಂಬಂಧಿಸಿ ನೀಡಿದ ತೀರ್ಪಿನಲ್ಲಿ ಸರ್ವೆ ನಂ.33/1ರಲ್ಲಿರುವಂತಹ 39 ಎಕರೆ 22 ಗುಂಟೆ ಜಮೀನು ಸರ್ವೆ ಸಮೀಕ್ಷೆ ನಡೆಸಿ, ಅಲ್ಲಿಯ ವಸ್ತು ಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವ ಕಾರಣಕ್ಕೆ ಇಂದು ಸಂಪೂರ್ಣ ಜಮೀನು ಸಮೀಕ್ಷೆ ಕಾರ್ಯ ಕೈಗೊಂಡಿತು.
ಗೋಶಾಲೆ ರಸ್ತೆಯಿಂದ ಚಂದ್ರಮೌಳೇಶ್ವರ ರಸ್ತೆವರೆಗೂ ಸುಮಾರು 15 ಅಧಿಕಾರಿಗಳ ತಂಡ ಸಮೀಕ್ಷೆ ಕಾರ್ಯ ಪೊಲೀಸ್ ಬಿಗಿ ಭದ್ರತೆಯೊಂದಿಗೆ ನಡೆಸಲಾಯಿತು. ಇದು ಇಲ್ಲಿಯ ನಿವಾಸಿಗಳಿಗೆ ಭಾರೀ ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದೆ. 39 ಎಕರೆ 22 ಗುಂಟೆ ಈಗಾಗಲೇ ಅನೇಕರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಏಕಾಏಕಿ ಈ ಸರ್ವೆ ಭಾರೀ ಕಳವಳಕ್ಕೆ ದಾರಿ ಮಾಡಿದೆ.
ಸರ್ವೆಯೊಂದಿಗೆ ಸರ್ಕಾರಿ ಜಮೀನಿನ ಮಾರ್ಕಿಂಗ್ ಕಾರ್ಯವೂ ನಡೆದಿದೆ. ಸಿಯಾತಲಾಬ್‌ನಲ್ಲಿರುವ 39 ಎಕರೆ 22 ಗುಂಟೆ ಜಮೀನು ಈ ಹಿಂದೆ ನಗರಸಭೆಯಿಂದ ಹರಾಜು ಮಾಡಲಾಗಿತ್ತು. ಕೈಗಾರಿಕಾ ಉದ್ದೇಶಕ್ಕೆ ಇದನ್ನು ಬಳಸಿಕೊಳ್ಳಲಾಗುತ್ತಿತ್ತು. ನಂತರದಲ್ಲಿ ಈ ಜಮೀನು ಖಾಸಗಿಯವರಿಗೆ ಮಾರಾಟ ಮಾಡಲಾಗಿತ್ತು. ನಗರಸಭೆಯಿಂದ ಹರಾಜು ಮಾಡಿರುವುದಕ್ಕೆ ಸಂಬಂಧಿಸಿ, ದಾಖಲೆಗಳು ಸಹ ಇವೆ.
ಆದರೆ, ಕಾಲಾಂತರ ನಂತರ ಉದ್ದೇಶಿತ ಜಮೀನು ಸರ್ಕಾರಕ್ಕೆ ಸೇರಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಈ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಹೈಕೋರ್ಟ್ ವಿಚಾರಣೆ ನಂತರ ಸಂಪೂರ್ಣ ಜಮೀನು ಸರ್ವೆಗೆ ಸೂಚಿಸಲಾಗಿತ್ತು. ಈ ಸೂಚನೆ ಹಿನ್ನೆಲೆಯಲ್ಲಿ ಇಂದು ಸಮೀಕ್ಷೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಸಮೀಕ್ಷೆ ನಂತರ ಸಮಗ್ರ ವರದಿಯನ್ನು ಜಿಲ್ಲಾಡಳಿತ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಈ ಜಮೀನಿಗೆ ಸಂಬಂಧಿಸಿ, ನ್ಯಾಯಾಲಯದ ಮುಂದಿನ ನಿರ್ಧಾರವೇನು ಎನ್ನುವುದೇ ಈಗ ಕುತೂಹಲದ ಸಂಗತಿಯಾಗಿದೆ.

Leave a Comment