ಪೊಲೀಸ್ ಠಾಣೆಗೆ ಬಾಂಬ್ ಎಸೆದ ಆರೋಪಿ ಸೆರೆ

ಕಣ್ಣೂರು, ಜ.೨೩- ಜಿಲ್ಲೆಯ ಪೊನ್ನಿಯಮ್‌ನ ನಯನಾರ್ ರಸ್ತೆಯಲ್ಲಿನ ಪೊಲೀಸ್ ಕಾವಲು ಠಾಣೆಗೆ ಬಾಂಬ್ ಎಸೆದ ಆರೋಪದಲ್ಲಿ ಆರೆಸ್ಸೆಸ್ ಕಾರ್ಯಕರ್ತನೊಬ್ಬನನ್ನು ಬಂಧಿಸಲಾಗಿದೆ. ಕೊಂಡಕ್ಕಲ್ಲಂನ ಪಾಲಪರಂಬತ್ ಹೌಸ್ ನಿವಾಸಿಯಾದ ಪ್ರಭೇಶ್ ಕೆ. ಬಂಧಿತ ಆರೆಸ್ಸೆಸ್ ಕಾರ್ಯಕರ್ತ.

ಆರೋಪಿಯನ್ನು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಬಂಧಿಸಲಾಗಿದೆ. ಕತಿರೂರ್ ಸಬ್‌ಇನ್‌ಸ್ಪೆಕ್ಟರ್ ಎಂ.ನಿತೇಶ್ ಅವರು ಕೊಯಂಬತ್ತೂರಿನ ಪೊಲೀಸ್ ಅಧಿಕಾರಿಗಳಾದ ಜೊಶಿತ್ ಹಾಗೂ ಬಿಜೇಶ್ ಜೊತೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಪ್ರಭೇಶ್‌ನನ್ನು ಬಂಧಿಸಲಾಯಿತೆಂದು ಕಣ್ಣೂರು ಪೊಲೀಸರು ತಿಳಿಸಿದ್ದಾರೆ. ಜನವರಿ ೧೬ರಂದು ನಸುಕಿನಲ್ಲಿ ೧ ಗಂಟೆಯ ವೇಳೆಗೆ ಪೊನ್ನಿಯಮ್‌ನ ನಯನಾರ್ ರಸ್ತೆಯಲ್ಲಿರುವ ಪೊಲೀಸ್ ಕಾವಲು ಠಾಣೆಯ ಮೇಲೆ ಬಾಂಬ್ ಎಸೆಯಲಾಗಿತ್ತು. ಬಂಧಿತ ಪ್ರಭೇಶ್, ವಿಚಾರಣೆಯ ವೇಳೆ ತಾನು ಬಾಂಬ್ ಎಸೆದಿರುವುದನ್ನು ಒಪ್ಪಿಕೊಂಡಿದ್ದಾನೆಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಕಾವಲು ಠಾಣೆಯ ಪಕ್ಕದಲ್ಲಿರುವ ಮನೋಜ್ ಸೇವಾ ಕೇಂದ್ರದ ಮೇಲೆ ಬಾಂಬ್ ದಾಳಿ ನಡೆಸುವುದು ತನ್ನ ಉದ್ದೇಶವಾಗಿತ್ತು. ಆದರೆ ತಪ್ಪಿ ಅದು ಪಿಕೆಟ್ ಠಾಣೆಯ ಮೇಲೆ ಬಿದ್ದಿತೆಂದು ಆತ ಒಪ್ಪಿಕೊಂಡಿದ್ದಾನೆ.

Leave a Comment