ಪೊಲೀಸ್ ಇಲಾಖೆಗೆ ಶೇ.20ರಷ್ಟು ಮಹಿಳಾ ಪೊಲೀಸರ ಅವಶ್ಯವಿದೆ : ಪ್ರವೀಣ್ ಸೂದ್

ಮೈಸೂರು. ಮೇ.10: ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ, ಹಿಂಸೆಗಳ ಕುರಿತು ಮಹಿಳಾ ಪೊಲೀಸರು ಸುಲಭವಾಗಿ ಅರ್ಥೈಸಿಕೊಳ್ಳುತ್ತಿದ್ದು, ಸಂವೇದನಾಶೀಲರಾಗಿರುತ್ತಾರೆ. ಅಲ್ಲದೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸುವುದರಿಂದ ಪೊಲೀಸ್ ಇಲಾಖೆಗೆ ಮಹಿಳಾ ಪೊಲೀಸರ ಅವಶ್ಯಕತೆಯಿದೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಅವರಿಂದು ಜ್ಯೋತಿನಗರದಲ್ಲಿರುವ ಪೊಲೀಸ್ ಶಾಲೆಯಲ್ಲಿ ಮೂರನೇ ತಂಡದ ಮಹಿಳಾ ಕಾನ್ಸಟೇಬಲ್ ಬುನಾದಿ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿಯಲ್ಲಿ 217 ಮಂದಿ ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿ ಪಡೆದು ನಿರ್ಗಮನ ಪಥಸಂಚಲನ ನಡೆಸಿದ್ದು, ಈ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. 217 ಮಹಿಳಾ ಪೊಲೀಸ್ ಕಾನ್ಸಟೇಬಲ್ಸ್ ಪ್ರಾಯೋಗಿಕವಾಗಿ ಪೊಲೀಸ್ ಇಲಾಖೆ ಸೇರುತ್ತಿದ್ದೀರಿ. ಈಗಾಗಲೇ ನಿಮಗೆ ಔಪಚಾರಿಕವಾಗಿ ಪತ್ರ ನೀಡಲಾಗಿದೆ. 8 ತಿಂಗಳ ತರಬೇತಿಯನ್ನು ಸಮರ್ಥವಾಗಿ ಮುಗಿಸಿ ರಾಜ್ಯ ಪೊಲೀಸ್ ಇಲಾಖೆಯ ಕುಟುಂಬವನ್ನು ಸೇರುತ್ತಿದ್ದೀರಿ. ಇನ್ನು ಮುಂದೆ ನಿಮ್ಮ ಮೇಲಿನ ಜವಾಬ್ದಾರಿ ಹೆಚ್ಚಲಿದೆ.
ಕಷ್ಟಪಟ್ಟು ನೀವು ಈ ಹಂತಕ್ಕೆ ಬಂದಿದ್ದೀರಿ. ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೀರೆಂಬ ಭರವಸೆ ನನಗಿದೆ ಎಂದರು. 50 ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಮಹಿಳೆಯರು ಯಾಕೆ ಬೇಕು ಎಂಬ ಪ್ರಶ್ನೆಯಿತ್ತು. ಕಂಟ್ರೋಲ್ ಮಾಡಬೇಕು, ಗೋಲಿಬಾರ್ ಮಾಡಬೇಕು, ಲಾಠಿಚಾರ್ಜ್ ಮಾಡಬೇಕು, ಮಹಿಳೆಯರಿಗೆ ಇದೆಲ್ಲ ಯಾಕೆ, ಅವಶ್ಯಕತೆ ಇಲ್ಲ ಎನ್ನುತ್ತಿದ್ದರು. ಆದರೆ ಈಗ ಆ ಅಭಿಪ್ರಾಯ ಬದಲಾಗಿದೆ. ಮಹಿಳೆಯರು ಪೊಲೀಸ್ ಆಗಿ ಸೇರಿದರು. ಮಹಿಳೆಯರಿಗೆ ಕಡಿಮೆ ಅವಧಿಯ ತರಬೇರಿ ಸಾಕು ಎನ್ನಲಾಗಿತ್ತು. ಆದರೆ ಪುರುಷರಿಗೆ ಎಷ್ಟು ತರಬೇತಿ ಬೇಕು, ಅದಕ್ಕೂ ಜಾಸ್ತಿ ಮಹಿಳೆಯರಿಗೆ ತರಬೇತಿಯ ಅವಶ್ಯಕತೆಯಿದೆ.
ನಮ್ಮ ಸಮಾಜದಲ್ಲಿ ಎಷ್ಟು ಅಪರಾಧಗಳು ಆಗತ್ತೋ, ಅದರಲ್ಲಿ 50% ಮಹಿಳೆಯರು, ಮಕ್ಕಳ ಮೇಲಿನದೇ ಆಗಿದೆ. ಅವರ ಪರಿಸ್ಥಿತಿ, ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮಹಿಳೆಯರು ಸಮರ್ಥರು. ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಈಗ ನೀವು ಸಮವಸ್ತ್ರ ಧರಿಸಿದ್ದೀರಿ, ಸಮವಸ್ತ್ರ ಧರಿಸದೇ ಬಸ್ಸಿನಲ್ಲೋ, ರೈಲಿನಲ್ಲೋ ಹೋದರೆ ಕಿರುಕುಳದ ಅನುಭವವಾಗತ್ತೆ, ಎಷ್ಟೋ ಮಂದಿ ಈಗಾಗಲೇ ಕಿರುಕುಳವನ್ನು ಅನುಭವಿಸಿದ್ದಿರಲೂಬಹುದು. ಅದಕ್ಕಾಗಿ ಅವರಿಗೆ ಮಹಿಳೆಯರಿಗಾಗುವ ಕಿರುಕುಳದ ಕುರಿತು ಅರಿಯುವ ಮನಸ್ಥಿತಿಯಿರಲಿದೆ ಎಂದರು. ಕಿರುಕುಳಕ್ಕೊಳಗಾದವರನ್ನು ಸಹಾನುಭೂತಿಯಿಂದ, ಸಮರ್ಥವಾಗಿ ಅರ್ಥಮಾಡಿಕೊಳ್ಳುತ್ತೀರಿ, ಅದಕ್ಕಾಗಿ ಸಮವೇಧನಾಶೀಲ ತರಬೇತಿಯನ್ನು ನೀಡುತ್ತೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಶೇ.20ರಷ್ಟು ಮಹಿಳೆಯರೇ ಇರಬೇಕು ಎಂಬ ಪ್ರಯತ್ನವಿದೆ.
ಆದರೆ ಇಲ್ಲಿಯವರೆಗೆ 6%ಆಗಿದೆ. 20%ತಲುಪಲು ಇನ್ನೂ ನಾಲ್ಕಾರು ಸಾವಿರಗಳು ಬೇಕು. ಇಲ್ಲಿ ಅರ್ಧಕ್ಕಿಂತ ಜಾಸ್ತಿ ಪದವೀಧರರೂ, ಸ್ನಾತಕೋತ್ತರರೂ ಆಗಿದ್ದೀರಿ ನಿಮ್ಮ ಹತ್ತಿರ ಒಳ್ಳೆಯ ಪದವಿಯಿದೆ. ಒಳ್ಳೆಯ ಕೆಲಸಗಳನ್ನು ಮಾಡಿ ಕ್ರೆಡಿಟ್ ತಗೊಳ್ಳಿ. ಇನ್ನೂ ಮೇಲಿನ ಹುದ್ದೆಗೆ ನೀವು ಇಷ್ಟಪಟ್ಟರೆ ಪಿಎಸ್ ಐ, ಎಸ್ ಐ, ಆಗುವ ಅವಕಾಶಗಳೂ ನಿಮಗಿವೆ. ಪ್ರಮೋಷನ್ ಅವಕಾಶಗಳು ಜಾಸ್ತಿ. 8 ತಿಂಗಳು ಕಷ್ಟಪಟ್ಟು ತರಬೇತಿ ಪಡೆದಿದ್ದೀರಿ. ಎಲ್ಲ ಕಷ್ಟ ಮುಗಿದಿದೆ. ಇಲ್ಲಿ ನಿಮ್ಮ ಕೆಲಸ ತಡರಾತ್ರಿ, ಬೆಳಗಿನ ಜಾವ, 10, 12, 16 ಗಂಟೆಯೂ ಇರಬಹುದು. ಪೊಲೀಸ್ ಕೆಲಸ 24 ಗಂಟೆಯದ್ದಾಗಿದೆ. ಇದಕ್ಕೆ ಸಿದ್ಧರಾಗಬೇಕು. ಪುರುಷರಿಗೆ ಎಷ್ಟು ಸವಾಲಿದೆಯೋ ಅದರ ಡಬ್ಬಲ್ ಸವಾಲು ಮಹಿಳೆಯರಿಗೆ. ಅವರು ಮನೆ, ಮಕ್ಕಳನ್ನೂ ಸಂಬಾಳಿಸಬೇಕು. ಪುರುಷರೂ ಕೂಡ ಅವರನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತ್ಯತ್ತಮ ಪ್ರಶಿಕ್ಷಣಾರ್ಥಿಯಾಗಿ ತಾರಾ. ಎ ಶಿವಮೊಗ್ಗ ಜಿಲ್ಲೆ, ಒಳಾಂಗಣ ಪ್ರಶಸ್ತಿಯಲ್ಲಿ ಗೀತಾ ಹೆಚ್ ಎನ್ ತುಮಕೂರು ಪ್ರಥಮ, ಸಕ್ಕಿಪಾಟೀಲ್ ದ್ವಿತೀಯ ಉತ್ತರಕನ್ನಡ, ಪ್ರಭಾವತಿ ರಾಮಪ್ಪ ಸುಳ್ಳನವರ ತೃತೀಯ ಬೆಳಗಾವಿ, ಹೊರಾಂಗಣ ಪ್ರಶಸ್ತಿಯಲ್ಲಿ ತಾರಾ ಎ, ಪ್ರಥಮ ಶಿವಮೊಗ್ಗ, ರಶ್ಮಿ ಎಂ.ಇ ದ್ವಿತೀಯ ರಾಮನಗರ ಜಿಲ್ಲೆ, ಶಹಜಾನ ದ್ವಿತೀಯ ಮಂಗಳೂರು ನಗರ, ವಿಜಯಲಕ್ಷ್ಮಿ ತೃತೀಯ ಕೊಪ್ಪಳ, ಫೈರಿಂಗ್ ನಲ್ಲಿ ಶಿಲ್ಪ ಹೆಚ್.ಜಿ ಪ್ರಥಮ ಮೈಸೂರು ನಗರ, ಪೂಜಶ್ರೀ ಎಂ ದ್ವಿತೀಯ ಉತ್ತರಕನ್ನಡ, ಜಯಶೀಲ ಎಂ ತೃತೀಯ ಮಂಹಳೂರು ನಗರ, ಶೈಲಶ್ರೀ ಎನ್ ತೃತೀಯ ಉತ್ತರ ಕನ್ನಡ ಇವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ತರಬೇತಿ ವಿಭಾಗದ ಪೊಲೀಸ್ ಮಾನಿರೀಕ್ಷಕ ರವಿ ಎಸ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ. ಧರಣಿದೇವಿ ಮಾಲಗತ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment