ಪೊಲೀಸ್‌ರ ಮುಂದೆ ರೆಡ್ಡಿ ಶರಣು ?

ಬೆಂಗಳೂರು, ನ.೯- ಡಿಲ್ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿ ತಲೆ ಮರೆಸಿಕೊಂಡಿರುವ  ಮಾಜಿ ಸಚಿವ ಜನಾರ್ಧನ ರೆಡ್ಡಿ ಸಿಸಿಬಿ ಪೊಲೀಸರ ಮುಂದೆ ಶರಣಾಗಲು ಮುಂದಾಗಿದ್ದಾರೆ.

ಜರ್ನಾಧನ ರೆಡ್ಡಿ ಸ್ನೇಹಿತ ಹಾಗೂ ಶಾಸಕ ಶ್ರೀ ರಾಮುಲು ಮಧ್ಯಸ್ಥಿಕೆ ವಹಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಜರ್ನಾಧನ ರೆಡ್ಡಿ ಸಿಸಿಬಿಯ ಮುಂದೆ ಶರಣಾಗುವ ಸಾಧ್ಯತೆಗಳಿವೆ.

ಕಳೆದ ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ರೆಡ್ಡಿಗಾಗಿ ಸಿಸಿಬಿ ಪೊಲೀಸರು ಆಂಧ್ರ ಪ್ರದೇಶ, ತೆಲಂಗಾಣ, ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ಆರಂಭಿಸಿದ್ದು, ಶತಾಯ ಗತಾಯ ಬಂಧಿಸಬೇಕೆಂದು ಎಂದು ಪಣ ತೊಟ್ಟಿರುವ ಬೆನ್ನಲ್ಲೇ ರೆಡ್ಡಿ ಶರಣಾಗತಿಗೆ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೆಡ್ಡಿ ಅವರಿಗೆ ಪದೇ ಪದೇ ಎದುರಾಗುತ್ತಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ಶಾಸಕ ಬಿ.ಶ್ರೀರಾಮುಲು ಜರ್ನಾಧನ ರೆಡ್ಡಿ ಅವರನ್ನು ಶರಣಾಗಿಸಲು ಮುಂದಾಗಿದ್ದಾರೆ.

ರೆಡ್ಡಿಗಾಗಿ ಶೋಧ

ಈ ನಡುವೆ ಜರ್ನಾಧನ ರೆಡ್ಡಿ ಒಂದು ವೇಳೆ ಪೊಲೀಸರ ಮುಂದೆ ಶರಣಾಗದಿದ್ದರೇ ಅವರನ್ನು ಬಂಧಿಸಲು ಟೊಂಕ ಕಟ್ಟಿ ನಿಂತಿದ್ದಾರೆ.

ಜನಾರ್ಧನರೆಡ್ಡಿ ಅವರ ಹೈದ್ರಾಬಾದ್‌ನ ಆಪ್ತರ ನಿವಾಸದಲ್ಲಿ ಬೀಡು ಬಿಟ್ಟಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ಅಧಿಕಾರಿಗಳ ತಂಡ ಹೈದ್ರಾಬಾದ್‌ನಲ್ಲಿ ಮೊಕ್ಕಂ ಹೂಡಿದ್ದು, ರೆಡ್ಡಿಗಾಗಿ ಶೋಧ ಆರಂಭಿಸಿದ್ದಾರೆ.

ಜನಾರ್ಧನರೆಡ್ಡಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಾಮೀನು ಸಿಗುವ ಮುನ್ನವೆ ಇಂದು ಅಥವಾ ನಾಳೆಯೊಳಗೆ ಜನಾರ್ಧನರೆಡ್ಡಿ ಅವರನ್ನು ಬಂಧಿಸದಿದ್ದರೆ ಇದುವರೆಗೂ ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಲಿದೆ ಎನ್ನುವುದನ್ನು ಮನಗಂಡಿರುವ ಸಿಸಿಬಿ ಅಧಿಕಾರಿಗಳ ತಂಡ ಬಂಧನಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದೆ.

ಆಂಬಿಡೆಂಟ್ ಕಂಪನಿಯಿಂದ ಪಡೆದಿದ್ದ 57 ಕೆಜಿ ಚಿನ್ನದ ಮೂಲ ಮತ್ತು ಜನಾರ್ಧನರೆಡ್ಡಿಗಾಗಿ ಶೋಧ  ಮುಂದುವರೆಸಿರುವ ಪೊಲೀಸರು ಚಿನ್ನ ಗಟ್ಟಿಯಾಗಿಯೇ ಉಳಿದಿದೆಯೇ ಅಥವಾ ಮಾರ್ಪಾಟ್ಟಾಗಿದೆಯೇ ಎನ್ನುವ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದ್ದು, ಇದರ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ.

ಜನಾರ್ಧನರೆಡ್ಡಿ ಅವರ ಬಂಧನಕ್ಕೆ ಬಲೆ ಬೀಸಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಿಸಿಬಿ ಅಧಿಕಾರಿಗಳಿಂದ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

ಬಂಧನಕ್ಕೆ ಹಿಂದೇಟು

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಪದೇ ಪದೇ ಕಂಠಕಪ್ರಾಯವಾಗುತ್ತಿರುವ ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ಊರು ಬಿಡಿಸುವ ಮೂಲಕ ಎದುರಾಗಿದ್ದ ಕಂಠಕವನ್ನು ದೂರ ಮಾಡುವ ಉದ್ದೇಶದಿಂದಲೇ ಪೊಲೀಸರು ರೆಡ್ಡಿಯನ್ನು ಬಂಧಿಸುತ್ತಿಲ್ಲ ಎನ್ನುವ ಚರ್ಚೆಗಳು ಆರಂಭವಾಗಿವೆ.

ಜನಾರ್ಧನರೆಡ್ಡಿ ಅವರನ್ನು ಊರು ಬಿಡಿಸಿದರೆ ಸರ್ಕಾರಕ್ಕೆ ಎದುರಾಗಿರುವ ತೊಂದರೆಯಿಂದ ಸದ್ಯಕ್ಕೆ ಪಾರಾಗಬಹುದು ಎನ್ನುವ ಉದ್ದೇಶ ಮುಖ್ಯಮಂತ್ರಿ ಕುಮಾರಸ್ವಾಮಿ ಅವರದು. ಹೀಗಾಗಿ, ರೆಡ್ಡಿ ಬಂಧನಕ್ಕಿಂತ ಊರು ಬಿಡಿಸುವುದೇ ಉದ್ದೇಶ ಎನ್ನಲಾಗುತ್ತಿದೆ.

ಜನಾರ್ಧನರೆಡ್ಡಿ ಬಂಧನವಾದರೆ ಜಾಮೀನಿನ ಮೇಲೆ ಹೊರ ಬರಬಹುದು ಎಂಬ ಕಾರಣಕ್ಕೆ ಪೊಲೀಸರು ರೆಡ್ಡಿ ಬಂಧನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಹೇಳಲಾಗುತ್ತಿದೆ.

ಜಾಮೀನಿಗೆ ಅರ್ಜಿ

ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಜರ್ನಾಧನ ರೆಡ್ಡಿ ಜಾಮೀನಿಗಾಗಿ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲದೇ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಹಾಗೂ ಸಿಸಿಬಿ ತನಿಖಾಧಿಕಾರಿಗಳು ಬದಲಾಯಿಸುವಂತೆ ಹೈ ಕೋರ್ಟ್ ನಲ್ಲಿ ವಕೀಲ ಚಂದ್ರಶೇಖರ್ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಸಿಸಿಬಿ ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿ ರಾಜಕೀಯ ಉದ್ದೇಶದಿಂದ ತಮ್ಮ ಮೇಲೆ ದಾಳಿ ನಡೆಸಿ ಸಮಸ್ಯೆಗೆ ಸಿಲುಕುವಂತೆ ಮಾಡಿದ್ದಾರೆ. ಹೀಗಾಗಿ ಪ್ರಕರಣವನ್ನು ಕೈಬಿಡುವಂತೆ ಅರ್ಜಿಯಲ್ಲಿ ತಿಳಿಸಿದ್ದಾರೆ.

Leave a Comment