ಪೊಲೀಸರ ಸರ್ಪಗಾವಲಿನ ನಡುವೆ ಸ್ವಾತಂತ್ರ್ಯೋತ್ಸವ ದಿನದ ಸಿದ್ಧತೆಗಳು

ಬೆಂಗಳೂರು, ಆ. ೧೩- ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಷಾ ಪರೇ‌ಡ್ ಮೈದಾನದಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಎಲ್ಲೆಡೆ ಸಿಸಿಟಿವಿ ಹಾಗೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಬಿಗಿ ಭದ್ರತೆ
ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಬಿಗಿ ಭದ್ರತೆಗಾಗಿ 9 ಡಿಸಿಪಿ, 16 ಎಸಿಪಿ, 51 ಇನ್ಸ್‌ಪೆಕ್ಟರ್, 91 ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ 1200 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು.
ಇದಲ್ಲದೆ ನಗರದಾದ್ಯಂತ 56 ಸಿಸಿ ಟಿವಿ, 8 ಶಸಸ್ತ್ರ ಪಡೆ, 40 ಪೊಲೀಸ್ ತುಕಡಿ ಸೇರಿದಂತೆ ಅಗತ್ಯ ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆ. 15 ರಂದು ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಲಿದ್ದು, ಅಂತಿಮ ಹಂತದ ಸಿದ್ಧತೆಗಳು ನ‌ಡೆದಿವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ವಿ. ಶಂಕರ್ ಹಾಗೂ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಥಸಂಚಲನದಲ್ಲಿ ಈ ಬಾರಿ ಕೇರಳ ಪೊಲೀಸರು ಮೊದಲ ಬಾರಿಗೆ ಭಾಗವಹಿಸುತ್ತಿದ್ದು, ಇವರಲ್ಲದೆ ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಯ ಮಕ್ಕಳನ್ನೊಳಗೊಂಡ ಕವಾಯತು, ಬ್ಯಾಂಡ್‌ನ 34 ತುಕಡಿಗಳೂ ಸೇರಿದಂತೆ 1190 ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಒಟ್ಟು ನಾಲ್ಕು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 2700 ಶಾಲಾ ಮಕ್ಕಳು ವೀರಸಿಂಧೂರ ಲಕ್ಷ್ಮಣ, ವಸುದೈವ ಕುಟುಂಬಕಂ, ಜೈ ಜವಾನ್, ಜೈಕಿಸಾನ್, ಶಾಂತಿ-ಕ್ರಾಂತಿ, ಸ್ವಾಂತತ್ರ್ಯ ಹೋರಾಟಗಾರರ ಮತ್ತು ಮಹಾನ್ ದೇಶಭಕ್ತ ಮುಂಡರ್ಗಿ ಭೀಮ್‌ರಾಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಲಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಇದೇ ವೇಳೆ ಸಾಂಕೇತಿಕವಾಗಿ ಜೀವರಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವೂ ಆಯೋಜಿಸಲಾಗಿದೆ.

ಸಾಂಸ್ಕೃತಿಕ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿದ್ದು, ಭದ್ರತೆ ಮತ್ತು ಸುರಕ್ಷತೆಗಾಗಿ 50 ಸಿಸಿ ಕ್ಯಾಮೆರಾ, 4 ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಲಾಗಿದೆ.
ಯಾವುದೇ ಕ್ಷಣದಲ್ಲಿ ಎದುರಾಗಬಹುದಾದ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಆಂಬುಲೆನ್ಸ್, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಗಣ್ಯವ್ಯಕ್ತಿಗಳಿಗಾಗಿ ಜಿ-2, ಸ್ವಾತಂತ್ರ್ಯ ಹೋರಾಟಗಾರರು, ಮಾಧ್ಯಮದವರು, ರಕ್ಷಣಾ ಇಲಾಖೆ ಅಧಿಕಾರಿಗಳಿಗಾಗಿ ಜಿ-1, ವಿವಿಧ ಇಲಾಖಾಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಅಧಿಕಾರಿಗಳಿಗಾಗಿ ಜಿ-3 ಹಾಗೂ ಸಾರ್ವಜನಿಕರಿಗಾಗಿ ಜಿ-4 ಗೇಟಿನ ಮೂಲಕ ಪ್ರವೇಶ ಕಲ್ಪಿಸಲಾಗಿದೆ ಎಂದರು.

ಪರ್ಯಾಯ ಪಾರ್ಕಿಂಗ್
ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಸಂಚಾರ ದಟ್ಟಣೆಗೆ ಅವಕಾಶ ಮಾಡಿಕೊಡದಿರಲು ಮಾಣಿಕ್ ಷಾ ಪರೇಡ್ ಮೈದಾನದ ವಿವಿಧ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ಎಲ್ಲರೂ ಬಳಸಿಕೊಳ್ಳುವಂತೆ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಮನವಿ ಮಾಡಿದರು.

Leave a Comment