ಪೊಲೀಸರ ವೇತನ ಹೆಚ್ಚಳ: ಮತ್ತೊಮ್ಮೆ ಪರಿಶೀಲನೆ ಭರವಸೆ

ತುಮಕೂರು, ಜೂ. ೧೨- ರಾಜ್ಯ ಪೊಲೀಸರ ವೇತನ ಹೆಚ್ಚಳ ಸಂಬಂಧ 6ನೇ ವೇತನ ಆಯೋಗ ಜಾರಿಗೆ ಮುನ್ನ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಪ್ರತಿಕ್ರಿಯಿಸಿದರು.

ನಗರದಲ್ಲಿ ವಿಧಿವಶರಾಗಿರುವ ಮಾಜಿ ಎಂ.ಎಲ್.ಸಿ ಟಿ.ಎಚ್.ನಾರಾಯಣಸ್ವಾಮಿ ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಈಗ ತಾನೇ ಮತ್ತೆ ಗೃಹ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಕಳೆದ ಬಾರಿ ಗೃಹ ಸಚಿವನಾಗಿದ್ದಾಗ ವೇತನ ಹೆಚ್ಚಳ ಸಂಬಂಧ ಪ್ರಸ್ತಾವನೆ ಇತ್ತು. ಕೆಲವು ತಿಂಗಳ ಬಿಡುವಿನ ನಂತರ ಮತ್ತೆ ಬಂದಿದ್ದೇನೆ. ವೇತನ ಹೆಚ್ಚಳದ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

 ಕಂಬನಿ ಮಿಡಿದ ಪರಂ

ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಟಿ.ಹೆಚ್. ನಾರಾಯಣಸ್ವಾಮಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ನಾರಾಯಣಸ್ವಾಮಿಯವರ ಅಗಲಿಕೆ ನನಗೆ ನೋವು ತಂದಿದೆ ಎಂದು ಕಂಬನಿ ಮಿಡಿದರು.

ನಾರಾಯಣಸ್ವಾಮಿ ಮತ್ತು ನಾನು ಒಳ್ಳೆಯ ಸ್ನೇಹಿತರು. ಅವರ ಅಗಲಿಕೆಯಿಂದ ಪಕ್ಷದ ಓರ್ವ ಉತ್ತಮ ಮುಖಂಡನನ್ನು ಕಳೆದುಕೊಂಡಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Comment