ಪೊಲೀಸರ ಮಿಂಚಿನ ಕಾರ್ಯಾಚರಣೆ: ಹಲವು ದ್ವಿಚಕ್ರವಾಹನಗಳ ವಶ

ಮೈಸೂರು.ಜ.5- ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ ಪರಿಣಾಮ ಒಂದೇ ಸಂಖ್ಯಾ ಫಲಕ ಹೊಂದಿರುವ ಹಾಗೂ ಸಂಖ್ಯಾ ಫಲಕ ಇಲ್ಲದೇ ಇರುವ ಹಲವು ದ್ವಿಚಕ್ರ ವಾಹನಗಹಳನ್ನು ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಶಾಂತಲ ಚಿತ್ರಮಂದಿರದ ಬಳಿ ಇರುವ ಸಿಗ್ನಲ್ ಕೇಂದ್ರದಲ್ಲಿ ಕಾರ್ಯಾಚರಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ರಘುರವರು ಕೆಲವು ದ್ವಿಚಕ್ರ ವಾಹನಗಳ ಮಾಲೀಕರು ಒಂದೇ ಸಂಖ್ಯಾಫಲಕವನ್ನು ಅಳವಡಿಸಿಕೊಂಡಿದ್ದರೆ ಮತ್ತೆ ಕೆಲವರು ಸಂಖ್ಯಾಫಲಕಗಳನ್ನು ಹಾಕಿಸಿಕೊಳ್ಳದೆ ತಮ್ಮ ವಾಹನಗಳನ್ನು ಚಾಲನೆ ಮಾಡುತ್ತಿರುವುದು ಸಂಚಾರಿ ಕಾನೂನು ರೀತ್ಯಾ ಅಪರಾಧವಾಗಿದೆ. ಇದು ತಮ್ಮ ಗಮನಕ್ಕೆ ಬಂದಿದ್ದು ಇದರ ಬಗ್ಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ಸಂಖ್ಯಾಫಲಕಗಳನ್ನು ಅಳವಡಿಸಿಕೊಳ್ಳದಿರುವ ವಾಹನಗಳನ್ನು ಎಂತಹ ಅಪರಾಧಗಳಿಗೂ ಬಳಸಿಕೊಳ್ಳಬಹುದೆಂಬ ಅನುಮಾನದಿಂದ ಇಂದು ತಪಾಸಣೆ ನಡೆದಿದೆ. ಇಂದು ತಮ್ಮ ವಶಕ್ಕೆ ಪಡೆದಿರುವ ದ್ವಿಚಕ್ರವಾಹನಗಳ ಮಾಲೀಕರು ಆ ವಾಹನಗಳಿಗೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ನಮಗೆ ತೋರಿಸುವುದರೊಂದಿಗೆ ತಮ್ಮ ಸಮ್ಮುಖದಲ್ಲಿಯೇ ಸಂಖ್ಯಾಫಲಕಗಳನ್ನು ಅಳವಡಿಸಿಕೊಂಡರೆ ಮಾತ್ರ ನಿಗದಿತ ದಂಡ ವಿಧಿಸಿ ವಾಹನವನ್ನು ಅವರಿಗೆ ಹಿಂದಿರುಗಿಸಲಾಗುವುದು. ಇಲ್ಲವಾದಲ್ಲಿ ಸಂಚಾರಿ ನಿಯಮಗಳಿಗನುಗುಣವಾಗಿ ಕ್ರಮ ಕೈಗೊಳ್ಳಲಾಗುವುದೆಂದು ರಘು ಹೇಳಿದರು.
ಇಂದಿನ ತಪಾಸಣಾ ಕಾರ್ಯದಲ್ಲಿ ಎ.ಎಸ್.ಐ ಗೌರಿಶಂಕರ್, ಸಿಬ್ಬಂದಿಗಳಾದ ಮಹೇಶ್, ಸಂದೀಪ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Comment