ಪೊಲೀಸರ ಬಂದೋಬಸ್ತ್ ನಲ್ಲಿ ತಂತಿ ಬೇಲಿ ಅಳವಡಿಕೆಗೆ ಚಾಲನೆ

ನಂಜನಗೂಡು. ಅ.18: ತಾಲೂಕಿನ ಕಡಕೊಳ ಹಾಗೂ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿ ಕಂಟೈನರ್‌ ಕಾರ್ಪೊರೇಷನ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯವರು ಕೆಐಡಿಬಿಯಿಂದ ಖರೀದಿಸಿರುವ ಭೂಮಿಗೆ ರೈತರ ವಿರೋಧದ ನಡುವೆಯೂ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ತಂತಿ ಬೇಲಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಕೆಐಡಿಬಿ ಯವರು ಕಡಕೊಳ ಹಾಗೂ ತಾಂಡವಪುರ ರೈತರ ಜಮೀನನ್ನು ವಶಪಡಿಸಿಕೊಂಡಿರುವ ರೈಲ್ವೆ ಇಲಾಖೆಯಿಂದ ಕಂಟೈನರ್‌ ತಯಾರಿಕಾ ಕಾರ್ಖಾನೆ ಆರಂಭಿಸಲು ಭೂಮಿಯನ್ನು ಕಂಟೈನರ್‌ ಕಾರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ ಕಂಪನಿಗೆ ಹಸ್ತಾಂತರಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಸ್ಥಳೀಯ ರೈತರು ಕಾರ್ಖಾನೆ ಆರಂಭಕ್ಕೂ ಮುನ್ನ ಭೂಮಿ ಕಳೆದುಕೊಂಡಿರುವ ರೈತ ಕುಟುಂಬಗಳಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಅಭಿರಾಮ್‌ ಶಂಕರ್‌ ಅಧ್ಯಕ್ಷತೆಯಲ್ಲಿ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಮ್ಮುಖದಲ್ಲಿ ರೈತರು, ಕೆಐಡಿಬಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿತ್ತಾದರೂ ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ ಕೆಲ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ನಡುವೆ ಕಂಟೈನರ್‌ ಕಾರ್ಪೊರೇಷನ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯವರು ಪೊಲೀಸ್‌ ಬಂದೋಬಸ್ತ್ ನಲ್ಲಿ ವಶಪಡಿಸಿಕೊಂಡ ಭೂಮಿಗೆ ತಂತಿ ಬೇಲಿ ಅಳವಡಿಸಲು ಮುಂದಾದರು. ಈ ಸಂದರ್ಭ ಸಂಘಟಿತರಾದ ಕೆಲ ರೈತರು ವಿರೋಧ ವ್ಯಕ್ತಪಡಿಸಿದರಾದರೂ ಸ್ಥಳದಲ್ಲಿಹಾಜರಿದ್ದ ಪೊಲೀಸರು ನೀಡಿದ ಎಚ್ಚರಿಕೆಯಿಂದಾಗಿ ಸಾಂಕೇತಿಕ ಪ್ರತಿಭಟನೆ ಕೈಬಿಟ್ಟು ನ್ಯಾಯಾಲಯದಲ್ಲೇ ನ್ಯಾಯ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಹಸೀಲ್ದಾರ್‌ ಕೆ.ಎಂ.ಮಹೇಶ್‌ ಕುಮಾರ್‌, ಡಿವೈಎಸ್‌ಪಿ ಸಿ.ಮಲ್ಲಿಕ್‌ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ಗ್ರಾ.ಪಂ ಸದಸ್ಯ ಗಿರೀಶ್‌, ರೈತರಾದ ಪುಟ್ಟಮಾದು, ಮಹದೇವು, ಮಲ್ಲು, ಬುಷ್ಯೇಗೌಡ, ದೊರೆಸ್ವಾಮಿ, ಶಿವಕುಮಾರ್‌, ಕರಿಯಪ್ಪ, ಯಶವಂತ್‌, ಮರಿಗೌಡ ಮತ್ತಿತರರು ಹಾಜರಿದ್ದರು.

Leave a Comment