ಪೊಲೀಸರ ದೌರ್ಜನ್ಯ ಖಂಡಿಸಿ ಠಾಣೆಗೆ ಮಹಿಳೆಯರ ಮುತ್ತಿಗೆ

ಕುಣಿಗಲ್, ಆ. ೭- ರಕ್ಷಣೆ ನೀಡಬೇಕಾದ ಆರಕ್ಷಕರೇ ರಾಕ್ಷಸರಂತೆ ವರ್ತಿಸಿದ್ದು, ಜೀವಾಪಾಯದಲ್ಲಿ ಇರುವ ಗಾಯಾಳುವಿಗೆ ಚಿಕಿತ್ಸೆ ಕೊಡಿಸದೇ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ಸ್ಥಳೀಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪೊಲೀಸರಿಂದ ಹಲ್ಲೆಗೊಳಗಾದ ಪದ್ಮನಾಭನನ್ನು ಎಎಸ್ಐ ವೈ.ಟಿ. ನಾರಾಯಣ್ ಸೇರಿದಂತೆ ಸುಮಾರು 8ಕ್ಕಿಂತ ಅಧಿಕ ಪೊಲೀಸರು ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಹುಲಿಯೂರುದುರ್ಗ ವೃತ್ತದಲ್ಲಿ ಸಂಘಟನೆಗೊಂಡ ನೂರಾರು ಗ್ರಾಮಸ್ಥರು ಮುಖ್ಯರಸ್ತೆಯಲ್ಲಿ ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಪ್ಪಿತಸ್ಥ ಪೊಲೀಸ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದುರ್ಗ ನಟರಾಜ್ ದೇಶದ್ರೋಹಿ ಕೃತ್ಯ ಮಾಡಿದವರಿಗೆ ಯಾವುದೇ ತೊಂದರೆಯಾಗದ ರೀತಿ ಕಾಪಾಡುವ ನಮ್ಮ ದೇಶದಲ್ಲಿ ಇಂತಹ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ರಕ್ಷಣೆ ಮಾಡುವ ಪೊಲೀಸರೇ ಭಕ್ಷಕರಾಗಿದ್ದಾರೆ ಎಂದು ಆರೋಪಿಸಿದರು.

ಹಲ್ಲೆಗೊಳಗಾದ ಪದ್ಮನಾಭನ ತಾಯಿ ಭಾಗ್ಯಮ್ಮ ಮಾತನಾಡಿ ತಮ್ಮ ಜೀವನದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿಲ್ಲ. ಸಾಧು ಸ್ವಭಾವದ ನನ್ನ ಮಗ ಪದ್ಮನಾಭ್‍ಗೆ ಎಎಸ್‌ಐ ನಾರಾಯಣ್ ಪೇದೆಗಳಾದ ರಂಗಸ್ವಾಮಿ, ದಿನೇಶ್, ರಂಗಪ್ಪ, ವೆಂಕಟೇಶ್, ಹರೀಶ್, ಸೇರಿದಂತೆ 3 ಮಂದಿ ಗೃಹರಕ್ಷಕ ಸಿಬ್ಬಂದಿಗಳು ಮನ ಬಂದಂತೆ ಥಳಿಸಿ,  ಹಲವಾರು ಅವಾಚ್ಯ ಶಬ್ದಗಳಿಂದ ನನ್ನ ಮನೆಯಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ಪೊಲೀಸರನ್ನು ರಕ್ಷಿಸಲು ಕೆಲವರು ಪ್ರಯತ್ನಿಸುತ್ತಿದ್ದು, ನಿಜವಾದ ತಪ್ಪಿತಸ್ಥ ಪೊಲೀಸರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಸಿಪಿಐ ಅಶೋಕ್ ಪ್ರತಿಭಟನಾಕಾರರನ್ನು ಮನವೊಲಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ನಾವು ಈಗಾಗಲೇ ಪತ್ರ ಬರೆದಿದ್ದೇವೆ.  ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

Leave a Comment