ಪೊಲೀಸರಿಗೆ ಎಲ್ಲಾ ಪ್ರಕರಣಗಳ ಪರಿಹಾರಗಳ ಬಗ್ಗೆ ಅರಿವು ಅಗತ್ಯ: ಟಿ.ಸುನೀಲ್ ಕುಮಾರ್

ಬೆಂಗಳೂರು, ಜೂ 12 -ನಾಗರಿಕರ ಎಲ್ಲಾ ಸಮಸ್ಯೆಗಳು ಅಂತಿಮವಾಗಿ ಪೊಲೀಸ್ ಠಾಣೆಗೆ ಬರುವುದರಿಂದ ಅವುಗಳ ಪರಿಹಾರದ ಬಗ್ಗೆ ಪೊಲೀಸರಿಗೆ ಸಮಗ್ರ ಮಾಹಿತಿ ಇರುವುದು ಅಗತ್ಯ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಬುಧವಾರ ಪೊಲೀಸ್ ಆಯುಕ್ತರ ಕಚೇರಿಯ ಇಮ್ಮಡಿ ಪುಲಿಕೇಶಿ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಜಾಗೃತಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಾಗರಿಕರು ಇನ್ನೊಬ್ಬರಿಂದ ಮೋಸ ಹೋದಾಗ, ಗಲಾಟೆ, ದರೋಡೆ, ಕೊಲೆ ಹೀಗೆ ಅವರಿಗೆ ಏನೇ ಸಮಸ್ಯೆ ಆದರೂ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇರುವುದರಿಂದ ಅವರು ಕೊನೆಗೆ ಬರುವುದು ಪೊಲೀಸ್ ಠಾಣೆಗೆ. ಆದ್ದರಿಂದ ಯಾವ ದೂರಿಗೆ ಹೇಗೆ ಪರಿಹಾರ ನೀಡಬೇಕು ಎಂಬುದರ ಕುರಿತು ಪೊಲೀಸರಿಗೆ ಅರಿವಿರಬೇಕು ಎಂದು ಹೇಳಿದರು.

ಈಗಾಗಲೇ ಅಪರಾಧ ನಿಯಂತ್ರಣ ಮಾಸಾಚರಣೆಯಡಿ ನಾಗರಿಕರಿಗೆ ಮೋಸ ಹೋಗಬೇಡಿ ಎಂದು ಜಾಗೃತಿ ಮೂಡಿಸುತ್ತಲೇ ಇದ್ದೇವೆ. ಆದರೂ, ಜನ ಜಾಗೃತರಾಗುತ್ತಿಲ್ಲ. ಇದೀಗ, ಐಎಂಎ ಜ್ಯೂವೆಲ್ಲರ್ಸ್ ನಲ್ಲಿ ಹಣ ಹೂಡಿಕೆ ಮಾಡುವುದರ ಮೂಲಕ ಮೋಸ ಹೋಗಿದ್ದಾರೆ. ಹಣ ಹೂಡುವುದಕ್ಕಿಂತ ಮುಂಚೆ ಅವರು ನಮ್ಮನ್ನು ಹೇಳಿ ಹಣ ಹೂಡಿಕೆ ಮಾಡಿಲ್ಲ. ಮೋಸ ಹೋಗಿದ್ದೇವೆ ಎಂದು ತಮಗೆ ಅರಿವಾದಾಗ ಕೊನೆಗೆ ಬಂದಿದ್ದು ಅವರು ಪೊಲೀಸ್ ಬಳಿ. ಹೀಗಾಗಿ ಅವರ ದೂರನ್ನು ದಾಖಲಿಸಿಕೊಳ್ಳುವುದು ನಮ್ಮ ಕರ್ತವ್ಯ. ಮಾಧ್ಯಮಗಳು ಸುಮಾರು 2 ಸಾವಿರ ಕೋಟಿ ರೂ.ಹಗರಣ ಎಂದು ಬಿತ್ತರಿಸುತ್ತಿವೆ. ಆದರೆ, ನಿಖರವಾಗಿ ಈ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು.

ಒಂದು ಪೊಲೀಸ್ ಠಾಣೆಯಲ್ಲಿ ವರ್ಷಕ್ಕೆ 6 ಸಾವಿರ ಸೈಬರ್ ಕ್ರೈಮ್ ಗಳು ದಾಖಲಾಗುತ್ತಿವೆ. ಯಾವುದೇ ಪ್ರಕರಣವಾದರೂ ತಕ್ಷಣವೇ ಕ್ರಮಕೈಗೊಳ್ಳಬಾರದು. ಮೊದಲು ತಾಳ್ಮೆಯಿಂದ ನಾಗರಿಕರ ದೂರು ಕೇಳಿಸಿಕೊಳ್ಳಬೇಕು. ಮೊದಲು 7ನೇ ತರಗತಿ ತೇರ್ಗಡೆ ಹೊಂದಿದವರು ಪೊಲೀಸ್ ಪೇದೆಯಾಗಲು ಅರ್ಹರಾಗಿದ್ದರು. ಕಾಲಕ್ರಮೇಣ ಅದು ಬದಲಾಗಿ ಈಗ ಪಿಯುಸಿ ತೇರ್ಗಡೆ ಹೊಂದಿದವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಳೆದ ಬಾರಿ ಪೊಲೀಸ್ ಪೇದೆ ಆಗಿ ಆಯ್ಕೆಗೊಂಡ 352 ಅಭ್ಯರ್ಥಿಗಳಲ್ಲಿ 35 ಅಭ್ಯರ್ಥಿಗಳು ಮಾತ್ರ ಪಿಯುಸಿ ಪಾಸಾಗಿದ್ದರು. ಉಳಿದವರು ಪದವಿ, ಸ್ನಾತಕೋತ್ತರ ಸೇರಿ ಉನ್ನತ ವ್ಯಾಸಂಗ ಮಾಡಿದವರೇ ಪೊಲೀಸ್ ಇಲಾಖೆಗೆ ನೇಮಕವಾಗಿದ್ದಾರೆ. ಅತಿ ಜ್ಞಾನವಂತರು ಇಲಾಖೆಗೆ ಪಾದಾರ್ಪಣೆ ಮಾಡುತ್ತಿರುವುದರಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತಿದೆ ಎಂದರು.

ಪೊಲೀಸರ ಮೇಲೆ ಸಾರ್ವಜನಿಕರು ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರೆ. ಪೊಲೀಸರಿಗೆ ಗೊತ್ತಿರದ ಯಾವುದೇ ವಿಷಯವೇ ಇಲ್ಲ ಎಂಬ ಭಾವನೆ ಅವರಲ್ಲಿದೆ. ಇಂದು ಸೈಬರ್ ಕ್ರೈಮ್ ಗಳು ಹೆಚ್ಚಾಗಿ ನಡೆಯುತ್ತಿವೆ. ತಂತ್ರಜ್ಞಾನವು ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಈ ಕೇಸುಗಳ ಬಗ್ಗೆಯೂ ತಿಳಿದುಕೊಂಡು ಪರಿಹಾರ ಸೂಚಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಐಫೋಕಸ್ ಕಂಪನಿಯ ನಿರ್ದೇಶಕರಾದ ಜ್ಯೋತಿ ಗಾಣಿಗರ್, ವೀರಾಜ್ ಗೌರವ್, ಗ್ರೀಫಿನ್ ಐಪಿ ಸರ್ವೀಸಸ್ ಹಾಗೂ ವಕೀಲರಾದ ಬೃಂದಾ ಕೆ.ವರಣ ಉಪಸ್ಥಿತರಿದ್ದರು.

ಈ ಕಾರ್ಯಾಗಾರದಲ್ಲಿ ಎಸಿಪಿ, ಪಿಐ, ಪಿಎಸ್ಐ ದರ್ಜೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Comment