ಪೆ.13, 14 ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರ ಮೆರವಣಿಗೆ

 ಉಡುಪಿ ಪೇಜಾವರ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ
ರಾಯಚೂರು.ಫೆ.11- ಬ್ರಾಹ್ಮಣ ಸಮಾಜ ಹಾಗೂ ಗುರುರಾಜ ಭಜನಾ ಮಂಡಳಿ ವತಿಯಿಂದ ವಿಶ್ವಗುರು ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರ, ಸರ್ವಮೂಲ ಗ್ರಂಥಗಳ ಶೋಭಾಯಾತ್ರೆ ಹಾಗೂ ಗುರುವಂದನಾ ಕಾರ್ಯಕ್ರಮ ಫೆ.13, 14 ರಂದು ನಗರದ ಶ್ರೀ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಡಿ.13 ರಂದು ಸಂಜೆ 4 ಗಂಟೆಗೆ ಜವಾಹರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀ ಮುಂಗ್ಲಿ ಪ್ರಾಣದೇವರ ದೇವಸ್ಥಾನದವರೆಗೆ ವಿಶ್ವಗುರು ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಸರ್ವಮೂಲ ಗ್ರಂಥಗಳ ಭವ್ಯ ಶೋಭಾಯಾತ್ರೆ ಮತ್ತು ಪರಮಪೂಜ್ಯ ಶ್ರೀ 1008 ವಿಶ್ವೇಶ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿದ್ಯದಲ್ಲಿ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಲಿದೆಂದರು.
ಫೆ.14 ರಂದು ಸಂಜೆ 6 ಗಂಟೆಗೆ ಐತಿಹಾಸಿಕ ಪಂಚಮ ಪರ್ಯಾಯ ಪೂರ್ಣಗೊಳಿಸಿದ ಹಾಗೂ 80 ನೇ ವರ್ಷದ ಪೀಠಾರೋಹಣ ಆಚರಿಸುತ್ತಿರುವ ಯತಿಕುಲ ಚಕ್ರವರ್ತಿ ಪರಮಪೂಜ್ಯ ಉಡುಪಿ ಪೇಜಾವರ ಮಠದ ಶ್ರೀ 1008 ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಗುರುವಂದನಾ ಕಾರ್ಯಕ್ರಮವು ಜರುಗಲಿದೆ. ಕನಕಾಭಿಷೇಕ, ಮುತ್ತಿನಭಿಷೇಕ, ಪುಷ್ಪವೃಷ್ಠಿ ಹಾಗೂ ತುಲಾಭಾರ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ 2 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂ.ಮುಕುಂದ ಆಚಾರ್ಯ ಜೋಶಿ, ಬಿ.ನರಸಿಂಹರಾವ್, ಜಯಕುಮಾರ ದಾಸ್, ಪ್ರಹ್ಲಾದ್, ಸುಧೀರ್ ಉಪಸ್ಥಿತರಿದ್ದರು.

Leave a Comment