ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕನ ಹತ್ಯೆ

ಗುಬ್ಬಿ/ಚೇಳೂರು, ಜು. ೧೬- ಯಾರೋ ದುಷ್ಕರ್ಮಿಗಳು ಯುವಕನೋರ್ವನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ತಾಲ್ಲೂಕಿನ ಚೇಳೂರು ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ.

ತಾಲ್ಲೂಕಿನ ಚೇಳೂರು ಹೋಬಳಿ ಹೂವಿನಕಟ್ಟೆ ರಂಗನಾಥಸ್ವಾಮಿ ದೇವಾಲಯದ ಬಳಿ ಮಧ್ಯರಾತ್ರಿ ಯಾರೋ ದುಷ್ಕರ್ಮಿಗಳು ಯುವಕನೋರ್ವನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ಹೂವಿನಕಟ್ಟೆ ರಂಗನಾಥಸ್ವಾಮಿ ದೇವಾಲಯ ಆಸುಪಾಸಿನಲ್ಲಿ ಇಂದು ಬೆಳಿಗ್ಗೆ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಹೂವಿನಕಟ್ಟೆ ರಂಗನಾಥಸ್ವಾಮಿ ದೇವಾಲಯದಲ್ಲಿ ಕೆಲಸ ಕಾರ್ಯ ಮಾಡಿಕೊಂಡಿದ್ದ ರಂಗನಾಥ (30) ಎಂಬಾತನೇ ಕೊಲೆಯಾಗಿರುವ ಯುವಕ ಎಂದು ಗುರುತಿಸಲಾಗಿದೆ.

ಈತ ಹಲವು ವರ್ಷಗಳಿಂದ ರಂಗನಾಥಸ್ವಾಮಿ ದೇವಾಲಯದಲ್ಲಿ ಕೆಲಸ ಮಾಡಿಕೊಂಡಿದ್ದನೆನ್ನಲಾಗಿದೆ.

ಮಧ್ಯರಾತ್ರಿ ಯಾರೋ ದುಷ್ಕರ್ಮಿಗಳು ದೇವಾಲಯಕ್ಕೆ ಬಂದು ಈತನನ್ನು ನಂಬಿಸಿ ಹೊರಗೆ ಕರೆದೊಯ್ದು ಈ ಕೃತ್ಯವೆಸಗಿದ್ದಾರೆ ಎಂದು ಶಂಕಿಸಲಾಗಿದೆ.

ದೇವಾಲಯದ ಸಮೀಪದಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದು, ಬೆಳಿಗ್ಗೆ ಗ್ರಾಮಸ್ಥರು ದೇವಾಲಯದ ಬಳಿ ಬಂದಾಗ ಅರೆಬರೆ ಸುಟ್ಟು ಸ್ಥಿತಿಯಲ್ಲಿ ರಂಗನಾಥನ ಕೊಲೆಯಾಗಿರುವುದು ಕಂಡು ಬಂದಿದೆ.

ತಕ್ಷಣ ಈ ಸುದ್ದಿಯನ್ನು ಗ್ರಾಮಸ್ಥರು ಚೇಳೂರು ಪೊಲೀಸರಿಗೆ ಮುಟ್ಟಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಕೊಲೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದಷ್ಟೆ ತಿಳಿಯಬೇಕಿದೆ.

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಸಿರಾ ಗ್ರಾಮಾಂತರ ಡಿವೈಎಸ್ಪಿ ವೆಂಕಟಸ್ವಾಮಿ, ಗುಬ್ಬಿ ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್, ಚೇಳೂರು ಪಿಎಸ್ಐ ಲಕ್ಷ್ಮೀಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕೊಲೆ ಪ್ರಕರಣವನ್ನು ಭೇದಿಸಲು ವಿಶೇಷ ತಂಡವನ್ನು ರಚಿಸುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚೇಳೂರು ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment