ಪೆಟ್ರೋಲ್-ಡೀಸೆಲ್ ತೆರಿಗೆ ಏರಿಕೆ ವಿರುದ್ದ ಬಿಜೆಪಿ ಪ್ರತಿಭಟನೆ

ಪುತ್ತೂರು, ಜ.೮- ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಮತ್ತು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ರಾಜ್ಯ ಸಚಿವ ಪುಟ್ಟರಂಗ ಶೆಟ್ಟಿ ಅವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಪುತ್ತೂರು ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ  ಸೋಮವಾರ ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ‘ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಜನರ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಗದ್ದುಗೆ ಉಳಿಸಿಕೊಳ್ಳುವ ಸಲುವಾಗಿ ಅವ್ಯವಸ್ಥೆ ಸೃಷ್ಠಿಸಿ, ಸೂಟ್‌ಕೇಸ್ ಭರ್ತಿ ಮಾಡುವ ಕೆಲಸದಲ್ಲಿ ಮುಳುಗಿರುವ ಈ ಸರ್ಕಾರ ಜನಸಾಮಾನ್ಯರ ಮೇಲೆಯೇ ತೆರಿಗೆ ವಿಧಿಸಲು ಹೊರಟಿದೆ. ಸರ್ಕಾರ ರೈತರ ಸಾಲ ಮನ್ನಾ ಬಗ್ಗೆ ನಾಟಕವಾಡುತ್ತಿದೆಯೇ ಹೊರತು ಈತನಕ ರೈತರಿಗೆ ಚಿಕ್ಕಾಸು ಸಾಲ ಮನ್ನಾ ಹಣ ಸಿಕ್ಕಿಲ’ ಎಂದು ಆರೋಪಿಸಿದರು. ಭ್ರಷ್ಟಾಚಾರದಲ್ಲಿ ಮುಳಗಿರುವ ರಾಜ್ಯ ಸರ್ಕಾರ ಸತ್ತಿದೆಯೋ ಅಥವಾ ಜೀವಂತವಿದೆಯೋ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿದ ವೇಳೆ ತೆರಿಗೆ ಏರಿಕೆ ಮಾಡುವ ಅಗತ್ಯ ರಾಜ್ಯ ಸರ್ಕಾರಕ್ಕೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಈ ಹಿಂದಿನ ಸರ್ಕಾರದ ಮಂತ್ರಿಗಳು ವಿಧಾನಸಭೆಯಲ್ಲಿ ಹಾಗೂ ಹೋದೆಡೆಗಳಲ್ಲಿ ನಿದ್ದೆ ಮಾಡುತ್ತಿದ್ದರು. ಈಗ ಸರ್ಕಾರವೇ ನಿದ್ದೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು. ಕ್ಷೇತ್ರ ಸಂದರ್ಶನ, ಮೋಜು-ಮಸ್ತ್‌ನಲ್ಲೇ ಕೆಲವು ಮಂತ್ರಿಗಳು ಕಾಲ ಕಳೆಯುತ್ತಿದ್ದರೆ,ಇನ್ನು ಕೆಲವರು ಸೂಟ್‌ಕೇಸ್ ಭರ್ತಿ ಮಾಡುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಈ ಸರ್ಕಾರ ತೊಲಗಲೇ ಬೇಕು ಎಂದರು.

ಕಾಂಗ್ರೆಸಿಗರಿಗೆ ಸವಾಲ್…..

ಮಾಜಿ ಸಚಿವ ರಮಾನಾಥ ರೈ ಅವರೇ ಮತ್ತು ಕಾಂಗ್ರೆಸಿಗರೇ, ತಾಕತ್ತಿದ್ದರೆ ನೀವೂ ನಮ್ಮ ಜತೆ ಸೇರಿಕೊಳ್ಳಿ. ಸಾಲ ಮನ್ನಾ ವಿಚಾರದಲ್ಲಿ ರೈತರನ್ನು ರೈತರನ್ನು ಗೊಂದಲಕ್ಕೀಡು ಮಾಡಿರುವ, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವ ಸರ್ಕಾರದ ವಿರುದ್ದದ ಹೋರಾಟದಲ್ಲಿ ನೀವೂ ಭಾಗವಹಿಸಿ ಎಂದು ಸಂಜೀವ ಮಠಂದೂರು ಅವರು ಕಾಂಗ್ರೆಸಿಗರಿಗೆ ಸವಾಲು ಹಾಕಿದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಮುಕುಂದ ಬಜತ್ತೂರು, ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶಂಭು ಭಟ್, ಕೇಶವ ಗೌಡ ಪುಯಿಲ, ಬಿಜೆಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ಭಟ್ ಕೆದಿಲ,  ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ನಗರಸಭೆಯ ಸದಸ್ಯರಾದ ವಿದ್ಯಾಗೌರಿ, ಗೌರಿ ಬನ್ನೂರು, ಭಾಮಿ ಅಶೋಕ್ ಶೆಣೈ, ಸುಂದರ ಪೂಜಾರಿ ಬಡಾವು, ಪಿ.ಜಿ.ಜಗನ್ನಿವಾಸ್, ಶಶಿಕಲಾ ಸಿ,ಎಚ್, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಬಪ್ಪಳಿಗೆ, ನಟ್ಟಿ ಉಮೇಶ್ ಶೆಣೈ,ಪುರುಷೋತ್ತಮ ಗೌಡ ಮುಂಗ್ಲಿಮನೆ ಮತ್ತಿತರರು ಇದ್ದರು.

Leave a Comment