ಪೆಟ್ರೋಲ್, ಡೀಸೆಲ್, ಇಂಧನ ದರ ಏರಿಕೆ ಖಂಡಿಸಿ

 ಕಾಂಗ್ರೆಸ್ ಸೈಕಲ್ ಜಾಥಾ, ಎತ್ತಿನಬಂಡಿ ಏರಿ ಪ್ರತಿಭಟನೆ
* ಜಿಲ್ಲಾ ಬಂದ್-ಜಾದಳ ಬೆಂಬಲ
ರಾಯಚೂರು.ಸೆ.10- ಪೆಟ್ರೋಲ್, ಡೀಸೆಲ್ ಮತ್ತು ಇಂಧನ ದರ ಏರಿಕೆ ಖಂಡಿಸಿ ಭಾರತ್ ಬಂದ್ ನಿಮಿತ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಜಿಲ್ಲಾ ಬಂದ್‌ ಸೈಕಲ್ ಜಾಥಾ ಹಾಗೂ ಎತ್ತಿನಬಂಡಿ ಏರಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್-ಜಾದಳ ಪಕ್ಷದ ಕಾರ್ಯಕರ್ತರು ಜಮಾಯಿಸಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ, ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಬಿ.ವಿ.ನಾಯಕ, ರವಿ ಬೋಸರಾಜು, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ ಅವರು ಎತ್ತಿನಬಂಡಿ ಏರಿ ನಗರಾದ್ಯಂತ ಸಂಚರಿಸಿ ತೆರೆದಿರುವ ಅಂಗಡಿ, ಮುಂಗಟ್ಟು ಬಂದ್ ಮಾಡುವಂತೆ ಮನವಿ ಮಾಡಿದರು.
ಕೇಂದ್ರ ಸರ್ಕಾರವೂ ಪೆಟ್ರೋಲ್, ಡೀಸೆಲ್ ಮತ್ತು ಇಂಧನ ದರ ಏರಿಕೆ ಮಾಡಿ, ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿರುವುದು ಖಂಡನೀಯ. ಪ್ರತಿನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತೀವ್ರ ತೊಂದರೆಗೆ ಗುರಿಯಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಕಡಿತಗೊಳಿಸದೆ, ಸಾಮಾನ್ಯ ಜನರ ಮೇಲೆ ಹೊರೆಯನ್ನಾಗಿಸಿದೆ.
ಈ ಹಿಂದೆ ಯುಪಿಎ ಸರ್ಕಾರದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದರೂ, ಜನರಿಗೆ ಯಾವುದೇ ತೊಂದರೆಯಾಗದಂತೆ ಪೆಟ್ರೋಲ್ ಬೆಲೆ ಕಡಿತಗೊಳಿಸಿದ್ದರು. ಆದರೆ, ಕೇಂದ್ರ ಬಿಜೆಪಿ ಸರ್ಕಾರವೂ ಬೆಲೆ ಕಡಿತಗೊಳಿಸದೆ, ಜನರ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ದೂರಿದರು. ಪ್ರಧಾನಿ ಮೋದಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆ ಅಧಿಕಾರಕ್ಕೆ ಬಂದ ನಂತರ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಆರೋಪಿಸಿದರು.
ಪೆಟ್ರೋಲ್ ಬೆಲೆ ಏರಿಕೆಯಾಗಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತು ಬೆಲೆ ಏರಿಕೆ ಗಗನಕ್ಕೇರಿರುವುದರಿಂದ ಜನರು ಕುಟುಂಬ ನಿರ್ವಹಿಸಲು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುವ ದುಸ್ಥಿತಿ ಒದಗಿ ಬಂದಿದೆ. ಕೂಡಲೇ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಇಂದನ ದರ ಕ‌ಡಿತಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಸದ ಬಿ.ವಿ.ನಾಯಕ, ರವಿ ಬೋಸರಾಜು, ಶಾಸಕ ದದ್ದಲ ಬಸವನಗೌಡ, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಪಾರಸಮಲ್ ಸುಖಾಣಿ, ಜಿ.ಬಸವರಾಜ ರೆಡ್ಡಿ, ಜಯಣ್ಣ, ಎನ್.ಶ್ರೀನಿವಾಸ ರೆಡ್ಡಿ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಅಬ್ದುಲ್ ಕರೀಂ, ರುದ್ರಪ್ಪ ಅಂಗಡಿ, ಬಾಬುರಾವ್, ಸೈಯದ್ ಶಾಲಂ, ದರೂರು ಬಸವರಾಜ, ಈ.ವಿನಯಕುಮಾರ, ಬಸವನಗೌಡ ತುರುಕನದೋಣಿ, ತಾಯಣ್ಣ ನಾಯಕ, ವೀರೇಶ ಬೂತಪ್ಪ, ಮಲ್ಲಿಕಾರ್ಜುನ, ಸಂದೀಪ್ ನಾಯಕ, ಉರುಕುಂದಪ್ಪ, ಆಂಜಿನೇಯ್ಯ, ಶ್ರೀಧರ್ ರೆಡ್ಡಿ, ತೇಜಪ್ಪ, ತಿಮ್ಮಪ್ಪ ನಾಯಕ, ನಾಗೇಂದ್ರಪ್ಪ ಮಟಮಾರಿ, ಇಸ್ಮಾಯಿಲ್, ನಿರ್ಮಲಾ ಬೆಣ್ಣೆ, ರಾಣಿ ರಿಚರ್ಡ್, ಅಲ್ಲದೆ ಜಾದಳ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಎನ್.ಶಿವಶಂಕರ್ ವಕೀಲರು, ನರಸಿಂಹಲು, ಉದಯ, ಆನಂದ ಪಾಟೀಲ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment