ಪೆಟ್ಟಿಗೆ ಅಂಗಡಿ – ಗುಡಿಸಲುಗಳಿಗೂ ಪರಿಹಾರ: ಸರ್ಕಾರದ ಮಹತ್ವದ ತೀರ್ಮಾನ

 

ಬೆಂಗಳೂರು.ಅ.೯. ರಾಜ್ಯದಲ್ಲಿ ಭಾರೀ ಮಳೆ ಮತ್ತು ನೆರೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ನೆರೆ ಹಾಗೂ ಬರ ಸಂಬಂಧಿತ ಸಂಪುಟ ಉಪ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ 1200 ಕೋಟಿ ರೂ. ನೆರೆಪರಿಹಾರ ಬಂದಿದ್ದು, ರೈತರ ಬೆಳೆ ಹಾನಿಗೆ 1035 ಕೋಟಿ ರೂ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಉಳಿದ ಹಣದಲ್ಲಿ ಶಾಲೆ ಜಿಲ್ಲಾ ಪಂಚಾಯಿತಿ ರಸ್ತೆ ಅಭಿವೃದ್ಧಿಗೆ ನೀಡಲಾಗುವುದು. ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 50 ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ಟೆಂಡರ್ ಇಲ್ಲದೆ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಎನ್.ಡಿ.ಆರ್.ಎಫ್. ನಿಯಮದ ಪ್ರಕಾರ ಪೆಟ್ಟಿಗೆ ಅಂಗಡಿ, ಮಗ್ಗದ ಮಳಿಗೆ, ಗುಡಿಸಲುಗಳಿಗೆ ಕೇಂದ್ರ ಸರ್ಕಾರದ ಹಣ ಬರುವುದಿಲ್ಲ. ರಾಜ್ಯ ಸರ್ಕಾರದಿಂದ ಪರಿಹಾರ ನೀಡಲು ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸುಮಾರು 1200 ಸಣ್ಣ ಪುಟ್ಟ ಅಂಗಡಿಗಳು ಹಾನಿಗೊಳಗಾಗಿದ್ದು, 3000 ಕ್ಕೂ ಅಧಿಕ ಗುಡಿಸಲುಗಳು ಹಾನಿಗೀಡಾಗಿವೆ, ಅವುಗಳಿಗೆ ಎಷ್ಟು ಪರಿಹಾರ ನೀಡಬೇಕು ಎನ್ನುವ ಕುರಿತಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬರದ ತಾಲೂಕುಗಳಲ್ಲಿ 1029 ಕೋಟಿ ರೂ. ರೈತರಿಗೆ ನೀಡಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಬರ ತಾಲೂಕುಗಳ ಪಟ್ಟಿ ಮಾಡಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

Leave a Comment