ಪೂರ್ಣ ಪ್ರಮಾಣದ ದಾಖಲೆ ಸಲ್ಲಿಕೆಗೆ ಸೂಚನೆ

ನವಲಗುಂದ, ಸೆ 9-  ಇಲ್ಲಿಯ ನವಲಗುಂದ ತಾಲ್ಲೂಕಾ ಶಿಕ್ಷಣ ಸಮಿತಿಯ ವತಿಯಿಂದ ನಡೆಸಲ್ಪಡುತ್ತಿರುವ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಿವೃತ್ತಿ ಅಥವಾ ಮರಣ ಹೊಂದಿದ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆಡಳಿತ ಮಂಡಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿ ಪಿ.ಎನ್.ಹಕ್ಕರಕಿ ಎಂಬುವರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ಈಗಿರುವ ಆಡಳಿತ ಮಂಡಳಿ ನೊಂದಾಯಿತ ಆಡಳಿತ ಮಂಡಳಿಯೇ ಅಥವಾ ದೂರುದಾರರು ಸಲ್ಲಿಸಿರುವ ದೂರಿನಂತೆಯೇ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಕುರಿತು ಈಗಿರುವ ಆಡಳಿತ ಮಂಡಳಿಯ ಬಗ್ಗೆ ಪೂರ್ಣ ಪ್ರಮಾಣದ ದಾಖಲಾತಿಗಳನ್ನು ತುರ್ತಾಗಿ ಒದಗಿಸುವಂತೆ ನ.ತಾ.ಶಿ.ಸಮಿತಿಯ ಅಧ್ಯಕ್ಷರಿಗೆ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.
ಈಗಿರುವ ಆಡಳಿತ ಮಂಡಳಿ ಬಾಂಬೆ ಟ್ರಸ್ಟ್ ಕಾಯ್ದೆಯ ಪ್ರಕಾರ ನೋಂದಾಯಿತ ಇದ್ದ ಆಡಳಿತ ಮಂಡಳಿಯನ್ನು ಬಾಂಬೆ ಟ್ರಸ್ಟ್ ರದ್ದಾದ ನಂತರ ರಾಜ್ಯ ಸರಕಾರದ ನಿಯಮಾನುಸಾರ ನೋಂದಣಿಯಾಗದೇ ಬೇಕಾಯ್ದೆಶಿರ ಆಡಳಿತ ನಡೆಸಲಾಗುತ್ತಿದೆ.  ಮೊದಲಿದ್ದ ಆಡಳಿತ ಮಂಡಳಿಯ ಯಾವೊಬ್ಬ ಸದಸ್ಯರು ಈಗಿರುವುದಿಲ್ಲ. ಮರಣ ಹೊಂದಿದ ನಿದೇರ್ಶಕರ ಜಾಗೆಯನ್ನು ಕಾಯ್ದೆ ಪ್ರಕಾರ ಭರ್ತಿ ಮಾಡದೇ ತಮ್ಮಿಚ್ಚೆಯಂತೆ ನಡೆದುಕೊಳ್ಳುತ್ತಿದ್ದಾರೆ.

ಈ ಸಮಿತಿಯ ಗೌರವ ಅಧ್ಯಕ್ಷರಾದ ಪಂಚಗೃಹ ಹಿರೇಮಠದ ಶ್ರೀಗಳನ್ನು ಕೂಡ ಕಡೆಗಣಿಸಿ ಕಾರ್ಯಾಧ್ಯಕ್ಷರಾಗಿರುವ ಬಿ.ಸಿ.ಪೂಜಾರ ಅವರು ಏಕ ಚಕ್ರಾಧಿಪತ್ಯ  ಆಡಳಿತ ನಡೆಸುತ್ತಿರುವುದು ಕಂಡುಬಂದಿದೆ. ಈಗಿರುವ ಕಾರ್ಯಾಧ್ಯಕ್ಷರು ಮೊದಲು ಇದೇ ಕಾಲೇಜಿಗೆ ನೌಕರರಾಗಿ ಬಂದು ನಿವೃತ್ತಿ ಹೊಂದಿದ ನಂತರ ಆಡಳಿತ ಮಂಡಳಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಮನಸೊ ಇಚ್ಚೆ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತ ಮಂಡಳಿಯ ಸದಸ್ಯರು ಕೂಡ ಬಿ.ಸಿ.ಪೂಜಾರ ಅವರ ಮಾತಿನಂತೆ ನಡೆದುಕೊಂಡು ಮೌನಕ್ಕೆ ಶರಣಾಗಿದ್ದಾರೆ. ಯಾರಾದರೂ ಪ್ರಶ್ನೆ ಮಾಡಿದರೆ ಅವರ ಬಾಯಿ ಮುಚ್ಚಿಸುವ ಕಲೆಗಾರಿಕೆ ಇವರದಾಗಿದೆ. ಭೋದಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಾಗ ಸಾಕಷ್ಟು ದೇಣಿಗೆ ಪಡೆದುಕೊಂಡು ಭರ್ತಿ ಮಾಡಲಾಗುತ್ತಿದೆ. ಕಾನೂನು ಪ್ರಕಾರ ಆಡಳಿತ ಮಂಡಳಿ ನೇಮಕವಾಗಿರುವುದಿಲ್ಲವಾದ್ದರಿಂದ ಆಡಳಿತಾಧಿಕಾರಿಯನ್ನು ತಕ್ಷಣವೇ ನೇಮಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪಿ.ಎನ್.ಹಕ್ಕರಕಿ ವಿವರವಾಗಿ ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಹೈಕೋರ್ಟ ವಕೀಲರಿಂದ ನೋಟಿಸ್ ಕೂಡ ಕೊಟ್ಟಿರುತ್ತಾರೆ. ಈಗಿರುವ ಆಡಳಿತ ಮಂಡಳಿಯು ಕಾಯ್ದೆ ಪ್ರಕಾರ ಆಡಳಿತ ನಡೆಸುತ್ತಿದೆಯೋ ಇಲ್ಲವೊ ಎಂಬುದು ಈಗ ಯಕ್ಷಪ್ರಶ್ನೆಯಾಗಿದ್ದು ಕಾಲೇಜು ಶಿಕ್ಷಣ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದೇ ಸೆಪ್ಟೆಂಬರ್ 15 ರಂದು ಬೋಧಕ ಮತ್ತು ಬೋಧಕೆತರ ಸಿಬ್ಬಂದಿ ನೇಮಕಾತಿಗಾಗಿ ಸಂದರ್ಶನಕ್ಕೆ ಆಹ್ವಾನಿಸಲಾಗಿದ್ದು. ಈ ಪ್ರಕ್ರಿಯೆ ಪ್ರಾರಂಭವಾಗುವುದಕ್ಕಿಂತಲೂ ಮೊದಲು ಕಾಲೇಜು ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ನ್ಯಾಯ ಒದಗಿಸಿಕೊಡಬೇಕಾಗಿದೆ.

Leave a Comment