ಪೂಜೆ ಮಾಡಿದ್ದವರ ಮನೆಯಲ್ಲಿ ಚಿನ್ನಾಭರಣ ಲೂಟಿ ಇಬ್ಬರು ಅರ್ಚಕರ ಸೆರೆ

ಬೆಂಗಳೂರು, ಅ. ೩೦- ಪರಿಚಯಸ್ಥರ ಮನೆಗೆ ನಕಲಿ ಕೀ ಬಳಸಿ, ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಐನಾತಿ ಅರ್ಚಕರನ್ನು ಸಂಪಿಗೆ ಹಳ್ಳಿ ಪೊಲೀಸರು ಬಂಧಿಸಿ, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರದ ಬೊಮ್ಮನಹಳ್ಳಿಯ ನಾಗರಾಜ್ ಅಲಿಯಾಸ್ ನಾಗಣ್ಣ (42), ಸಂಪಿಗೆ ಹಳ್ಳಿಯ ಶ್ರೀರಾಮಪುರದ ಲಕ್ಷ್ಮಣ (38) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 42 ಗ್ರಾಂ.ನ ನೆಕ್ಲೆಸ್, 42 ಗ್ರಾಂ ತೂಕದ ಚಿನ್ನದ ಚೈನ್, ಬಳೆ ಸೇರಿ, 8 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಆರೋಪಿ ನಾಗಣ್ಣ, ಪೂಜೆ, ಹೋಮ, ಹವನ ಅಲ್ಲದೆ, ಸ್ಮಶಾನದಲ್ಲೂ ಪೂಜೆಗಳನ್ನು ನಡೆಸುತ್ತಿದ್ದರೆ, ಮತ್ತೊಬ್ಬ ಆರೋಪಿ ಲಕ್ಷ್ಮಣ, ಶ್ರೀರಾಮಪುರದ ಮಾರಮ್ಮ ದೇವಸ್ಥಾನದ ಅರ್ಚಕನಾಗಿದ್ದ.
ಸಂಪಿಗೆ ಹಳ್ಳಿಯ ಪವನ್ ಅವರ ಮನೆಗೆ ಪೂಜೆ ನೆಪದಲ್ಲಿ ಆರೋಪಿ ನಾಗಣ್ಣ ಆಗಾಗ ಹೋಗಿಬರುತ್ತಿದ್ದು, ಮನೆಯವರ ವಿಶ್ವಾಸ ಗಳಿಸಿದ್ದ. ಕಳೆದ ಅಕ್ಟೋಬರ್ 17 ರಂದು ಪವನ್ ತಾಯಿ, ತಂಗಿ ಸೇರಿ ಇಡೀ ಕುಟುಂಬ ಧರ್ಮಸ್ಥಳಕ್ಕೆ ಹೋಗುತ್ತಿರುವುದನ್ನು ನಾಗಣ್ಣ ಬಳಿ ಹೇಳಿಕೊಂಡಿದ್ದರು.
ಪವನ್ ಕುಟುಂಬದವರು ಜಮೀನ್ದಾರರಾಗಿದ್ದು, ಅವರ ಮನೆಯಲ್ಲಿ ಸುಮಾರು 2 ಕೆಜಿ ಗಳಿಗೂ ಹೆಚ್ಚಿನ ಚಿನ್ನಾಭರಣಗಳು, ನಗದು ಇರುವುದನ್ನು ನಾಗಣ್ಣ ತಿಳಿದುಕೊಂಡಿದ್ದ. ಧರ್ಮಸ್ಥಳಕ್ಕೆ ಪವನ್ ಕುಟುಂಬ ಹೋಗುವುದನ್ನು ತಿಳಿದು ಮನೆಯಲ್ಲಿದ್ದ ಕೀ ಯನ್ನು ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿಕೊಂಡು ಇಟ್ಟುಕೊಂಡಿದ್ದ.
ಪವನ್ ಕುಟುಂಬದವರು ಅ. 17 ರಂದು ಧರ್ಮಸ್ಥಳಕ್ಕೆ ಹೋದ ಮರುದಿನವೇ ಸ್ನೇಹಿತನಾಗಿದ್ದ ಅರ್ಚಕ ಲಕ್ಷ್ಮಣನ ಜೊತೆ ನಕಲಿ ಕೀ ಬಳಸಿ, ಮನೆಗೆ ನುಗ್ಗಿ 200 ಗ್ರಾಂ. ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಸಂಪಿಗೆ ಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ನಂದಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಪವನ್ ಮನೆಗೆ ಆಗಾಗ ನಾಗಣ್ಣ ಬರುವುದು ಪತ್ತೆಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಲಕ್ಷ್ಮಣನ ಜೊತೆ ಸೇರಿ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಇದೇ ಮೊದಲ ಬಾರಿಗೆ ಕಳ್ಳತನ ಕೃತ್ಯಕ್ಕೆ ಇಳಿದಿದ್ದ ನಾಗಣ್ಣ, ಪವನ್ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ನಗದು ಇದ್ದು, ಅದನ್ನು ಕಳವು ಮಾಡಿ, ಐಷಾರಾಮಿ ಜೀವನ ನಡೆಸುವ ಯೋಜನೆ ಹಾಕಿಕೊಂಡಿದ್ದ. ಆದರೆ ಪ್ರವಾಸಕ್ಕೆ ಹೋಗುವ ಒಂದೆರಡು ದಿನಗಳ ಮುನ್ನವೇ ಮನೆಯಲ್ಲಿದ್ದ 2 ಕೆಜಿಯಷ್ಟು ಚಿನ್ನಾಭರಣಗಳನ್ನು ಪವನ್ ತಾಯಿ ಬ್ಯಾಂಕಿನ ಲಾಕರ್‌ನಲ್ಲಿ ಇಟ್ಟಿದ್ದರು.

Leave a Comment