ಪುಸ್ತಕದ ಮುಂದೆ ಸಾಮಾಜಿಕ ಜಾಲತಾಣ ತೃಣ ಎಂದ ಅಕ್ಷರ ಪ್ರಿಯರು

ರಾಯಚೂರ, ಡಿ.2- ಸಾಮಾಜಿಕ ಜಾಲತಾಣಗಳು ಎಷ್ಟೇ ಪ್ರಾಬಲ್ಯ ಹೊಂದಿದ್ದರೂ ಸಹ ಕನ್ನಡ ನಾಡಿನ ಜನತೆ ಪುಸ್ತಕಗಳ ಮೇಲಿನ ಪ್ರೀತಿಯನ್ನು ಕಡಿತಗೊಳಿಸಿಲ್ಲ ಎಂಬುದಕ್ಕೆ ಸಾಕ್ಷಿ ಇಲ್ಲಿನ ಪುಸ್ತಕ ಮಳಿಗೆಗಳಿಗೆ ಮುಗಿಬಿದ್ದ ಅಕ್ಷರ ಪ್ರೇಮಿಗಳು.
ಇಲ್ಲಿನ ಕೃಷಿ ವಿ.ವಿ. ಆವರಣದ ಸಮಾನಾಂತರ ವೇದಿಕೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಪುಸ್ತಕ ಮಳಿಗೆಗಳಿಗೆ ಬೆಳಿಗ್ಗೆಯಿಂದಲೇ ಜನರು ಮುಗಿ ಬೀಳುತ್ತಿದ್ದುದು ಕಂಡು ಬಂದಿತು.
ಮೈಸೂರು, ಗದಗ,ವಿಜಯಪುರ, ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಸೇರಿದಂತೆ ನಾಡಿನ ಹಲವಾರು ನಗರಗಳ ಪ್ರಕಾಶಕರು ಇಲ್ಲಿ ತಮ್ಮ ಮಳಿಗೆಗಳನ್ನು ಸ್ಥಾಪಿಸಿದ್ದಾರೆ.
ಕುವೆಂಪು, ತ.ರಾ.ಸು. ಬೇಂದ್ರೆ, ಶಿವರಾಮ ಕಾರಂತ ಡಾ. ಚಂದ್ರಶೇಖರ ಕಂಬಾರ, ಡಾ.ಯು ಆರ್. ಅನಂತ ಮೂರ್ತಿ, ವಿ.ಕೃ. ಗೋಕಾಕ, ಮಾಸ್ತಿ ವೆಂಕಟೇಶ ಅಯ್ಯಂಗಾರ, ದಲಿತ ಕವಿ ಸಿದ್ದಲಿಂಗಯ್ಯ ಸೇರಿದಂತೆ ನಾಡಿನ ಹೆಸರಾಂತ ಹಿರಿಯ, ಕಿರಿಯ, ಕವಿ ಮತ್ತು ಸಾಹಿತಿಗಳ ಸಾರಸ್ವತ ಲೋಕದ ಕೃತಿಗಳ ಅನಾವರಣವೇ ಇಲ್ಲಿ ನೆರೆದಿತ್ತು.
ಮೈಸೂರಿನ ಧಾತ್ರಿ ಪ್ರಕಾಶನದ ವತಿಯಿಂದ 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರ ಒಂದು ಊರಿನ ಕಥೆ, ಪರಂಪರೆಯೊಂದಿಗೆ ಪಿಸುಮಾತು, ಅನುಸಂಧಾನ ಮತ್ತಿತರ ಕೃತಿಗಳಿಗಾಗಿ ಪ್ರತ್ಯೇಕ ಒಂದು ಮಳಿಗೆಯನ್ನೇ ಸ್ಥಾಪಿಸಿರುವುದು ವಿಶೇಷವಾಗಿ ಗಮನ ಸೆಳೆಯಿತು.
ಈ ಎಲ್ಲ ಮಳಿಗೆಗಳ ಸುತ್ತ ಮುತ್ತ ಚಿಣ್ಣರು, ವೃದ್ಧರು, ಮಹಿಳೆಯರು ಸೇರಿದಂತೆ ಅಪಾರ ಅಕ್ಷರ ಪ್ರೇಮಿಗಳು ಪುಸ್ತಕ ಕೊಳ್ಳುವ ತರಾತುರಿಯಲ್ಲಿರುವ ದೃಷಿಯ ಸಾಮಾನ್ಯವಾಗಿತ್ತು.
ಸಾಮಾಜಿಕ ಜಾಲತಾಣಗಳಿಂದ ಎಷ್ಟೇ ಮಾಹಿತಿ ಸಿಕ್ಕರೂ ಪುಸ್ತಕದಿಂದ ದೊರಕುವ ಜ್ಞಾನ ಮಾಹಿತಿಯೇ ವಿಭಿನ್ನ ಎಂಬುದನ್ನು ಕನ್ನಡಿಗರು ಸಾಬೀತು ಪಡಿಸುವಂಥ ಜಾತ್ರೆ ಪುಸ್ತಕ ಮಳಿಗೆಗಳಲ್ಲಿ ಕಂಡು ಬಂದಿತು.
ಪುಸ್ತಕ ಪ್ರೇಮಿಗಳನ್ನು ಉತ್ತೇಜಿಸಲು ಅಲ್ಲಲ್ಲಿ ಪುಸ್ತಕ ಕೊಳ್ಳಿರಿ, ಪುಸ್ತಕ ಓದಿರಿ ಎಂಬ ಸ್ಲೋಗನ್ ಗಳು ರಾರಾಜಿಸುವುತ್ತಿದ್ದವು.

Leave a Comment