ಪುಲ್ವಾಮಾ ದಾಳಿಗೆ ವರ್ಷ ಹುತಾತ್ಮ ಯೋಧರಿಗೆ ಮೋದಿ ನಮನ

ನವದೆಹಲಿ, ಫೆ. ೧೪- ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿ, 40ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿದ ದುರ್ಘಟನೆಗೆ ಇಂದಿಗೆ ಒಂದು ವರ್ಷ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಸೇನಾಪಡೆಯ ಮುಖ್ಯಸ್ಥರು, ಅಗಲಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ.
ಕಳೆದ ವರ್ಷ ಫೆ. 14 ರಂದು 2,500 ಮಂದಿ ಭದ್ರತಾ ಸಿಬ್ಬಂದಿ, 78 ಬಸ್‌ಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸುತ್ತಿದ್ದ ಸಮಯದಲ್ಲಿ ಉಗ್ರರು ದಾಳಿ ನಡೆಸಿ 40ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿದ್ದರು. ಇದರ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಷ್-ಎ-ಮೊಹ್ಮದ್ ಉಗ್ರಸಂಘಟನೆ ಹೊಣೆ ಹೊತ್ತು ಕೊಂಡಿತ್ತು.
ಪಿಎಂ ನಮನ
ಕಳೆದ ವರ್ಷ ಫೆ. 14 ರಂದು ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿ.ಆರ್.ಪಿ.ಎಫ್) ಸೇರಿದ ಯೋಧರಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ನಮನ ಸಲ್ಲಿಸಿದರು.
`ಕಳೆದ ವರ್ಷ ಪುಲ್ವಾಮಾದಲ್ಲಿ ನಡೆದ ಘೋರ ದಾಳಿಯಲ್ಲಿ ಸಾವಿಗೀಡಾದ ಧೈರ್ಯವಂತ ಹುತಾತ್ಮರಿಗೆ ನಮನಗಳು, ದೇಶಕ್ಕೆ ಸೇವೆ ಸಲ್ಲಿಸುತ್ತ ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ತಮ್ಮ ಜೀವಗಳನ್ನು ಸಮರ್ಪಿಸಿದ ಅವರೆಲ್ಲರೂ ಅದ್ವಿತೀಯ ನಾಗರಿಕರು ಅವರು ಈ ಬಲಿದಾನವನ್ನು ದೇಶವು ಎಂದಿಗೂ ಮರೆಯಲಾರದು’ ಎಂದು ಪ್ರಧಾನಮಂತ್ರಿಗಳು ತಮ್ಮ ಟ್ವೀಟ್‌ನಲ್ಲಿ ಗೌರವ ಸೂಚಿಸಿದ್ದಾರೆ.
ರಕ್ಷಣಾ ಮಂತ್ರಿ ರಾಜನಾಥ್‌ಸಿಂಗ್ ಕೂಡ ತಮ್ಮ ಟ್ವೀಟ್‌ನಲ್ಲಿ ಸಿ.ಆರ್‌.ಪಿ.ಎಫ್ ಸಿಬ್ಬಂದಿ ಸೇವೆ, ಬಲಿದಾನವನ್ನು ಕೊಂಡಾಡಿದ್ದಾರೆ. ಭಯೋತ್ಪಾದಕತೆಯ ಪಿಡುಗಿನ ವಿರುದ್ಧದ ಹೋರಾಟವನ್ನು ಮುಂದುವರೆಸುವುದಕ್ಕೆ ಬದ್ಧರಾಗಿದ್ದೇವೆ ಎಂದೂ ಅವರು ತಮ್ಮ ಟ್ವೀಟ್‌ನಲ್ಲಿ ಭರವಸೆ ನೀ‌ಡಿದ್ದಾರೆ.
ಸ್ಮಾರಕ ನಿರ್ಮಾಣಕ್ಕೆ ಆಕ್ಷೇಪ
ಪುಲ್ವಾಮ ದಾಳಿಗೆ ತುತ್ತಾದ ಯೋಧರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ ಎಂದು ಸಿಪಿಐ(ಎಂ) ಮುಖಂಡ ಮೊಹ್ಮದ್ ಸಲೀಂ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹತರಾಗಿದ್ದರು. ಈ ಹಿನ್ನೆಲೆಯಲ್ಲಿ ಹುತಾತ್ಮ ಯೋಧರ ಹೆಸರಿನಲ್ಲಿ ಕೇಂದ್ರ ಸರ್ಕಾರ ಸ್ಮಾರಕ ಉದ್ಘಾಟನೆಯಾಗುತ್ತಿರುವ ಹೊತ್ತಿನಲ್ಲೆ ಸಿಪಿಐ (ಎಂ)ನಿಂದ ಈ ಹೇಳಿಕೆ ಹೊರಬಿದ್ದಿದೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಹತರಾದ ಯೋಧರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ ಅವಶ್ಯಕತೆ ಇಲ್ಲ.ಆದರೆ ೮೦ ಕೆ.ಜಿ. ಆರ್‌ಡಿಎಕ್ಸ್ ಅಂತಾರಾಷ್ಟ್ರೀಯ ಗಡಿ ದಾಟಿ ಬಂದಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಪುಲ್ವಾಮ ಬಾಂಬ್ ದಾಳಿಯಲ್ಲಿ ಮಡಿದ ಯೋಧರ ಆತ್ಮಕ್ಕೆ ಶ್ರದ್ದಾಂಜಲಿ ಸಲ್ಲಿಸಬೇಕು, ಆದರೆ ಇಂತಹ ದಾಳಿಯನ್ನು ತಡೆಯಲು ವಿಫಲವಾಗಿದ್ದೇವೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ದಾಳಿ ಮರುಕಳಿಸದಂತೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಯೋಧರಿಗೆ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ. ಆರ್‌ಡಿಎಕ್ಸ್ ಗಡಿ ದಾಟಿ ಹೇಗೆ ಬಂತು ಎಂಬ ಬಗ್ಗೆ ಸಮಗ್ರ ತನಿಖೆಯಾಗಿಬೇಕು ಎಂದು ಅವರು ಒತ್ತಾಯಿಸಿದರು.

Leave a Comment