ಪುನರ್ ವಸತಿಗಾಗಿ ಅಲೆಮಾರಿಗಳ ಮನವಿ

ಬಳ್ಳಾರಿ, ಸೆ.5: ಪುನರ್ ವಸತಿ ಸೌಲಭ್ಯ, ನೇರಸಾಲ, ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಿ ಎಂದು ಜಿಲ್ಲಾ ಆಡಳಿತಕ್ಕೆ ಅಲೆಮಾರಿ ಗುಡಾರ-ಗುಡಿಸಲು ನಿವಾಸಿಗಳ ಕಲ್ಯಾಣ ಸಂಘ ಮನವಿ ಮಾಡಿದೆ.

ಜಿಲ್ಲೆಯಲ್ಲಿ ಅಲೆಮಾರಿ ಜನಾಂಗವಾಗಿಸುವ ಪ್ರದೇಶಗಳಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ. ನಮ್ಮ ಸಂಕಷ್ಟಗಳನ್ನು ಆಲಿಸಲು 2017ರ ಡಿಸೆಂಬರ್ ತಿಂಗಳ ನಂತರ ಜಿಲ್ಲಾಡಳಿತ ಸಭೆ ನಡೆಸಿಲ್ಲ.

ಈವರೆಗೆ ನೆರವು ಕೋರಿ 2500ಕ್ಕೂ ಹೆಚ್ಚು ಅರ್ಜಿಗಳನ್ನು ಜಿಲ್ಲಾಡಳಿತಕ್ಕೆ ನೇರಸಾಲ, ನಿವೇಶನಗಳ ಮಂಜೂರು, ಮೂಲಸೌಕರ್ಯಗಳಿಗಾಗಿ ಅಂಬೇಡ್ಕರ್ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿದೆ. ಆದರೆ ವಿಲೇವಾರಿಯಾಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಸಭೆ ಕರೆದು ಅರ್ಜಿಗಳ ವಿಲೇವಾರಿ ಮಾಡಬೇಕು, ಸಭೆಗೆ ಅಲೆಮಾರಿ ಸಂಘಟನೆಗಳ ಎಲ್ಲಾ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಬೇಕು.

ಅಲೆಮಾರಿ ಜನಾಂಗದ ಪುನರ್ ವಸತಿ ಶಿಕ್ಷಣ, ಕಾಲೋನಿಗಳಲ್ಲಿ ಬೀದಿ ದೀಪ ಮೊದಲಾದ ಸೌಲಭ್ಯ ಒದಗಿಸಲು ಸರ್ಕಾರ 2015-16ನೇ ಬಜೆಟ್ ನಲ್ಲಿ ನೀಡಿದ ಹಣ ಈವರೆಗೆ ಬಳಕೆ ಮಾಡಿಲ್ಲ. ಅದನ್ನು ಬಳಕೆ ಮಾಡಿಕೊಂಡು ನಮ್ಮ ಸಂಕಷ್ಟಗಳನ್ನು ಪರಿಹರಿಸಿ ನಮ್ಮ ಈ ಮನವಿಗೆ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯೋಜನೆಗಳ ಅನುಷ್ಠಾನ ಸಮಿತಿಗೆ ಸದಸ್ಯರನ್ನು ಸಂಘದ ಗಮನಕ್ಕಿಲ್ಲದೆ ನೇಮಕ ಮಾಡಿದ್ದು ಅವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಹೊಸ ಸದಸ್ಯರ ನೇಮಕ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ, ಕಾರ್ಯದರ್ಶಿ ಹೆಚ್.ಪಿ.ಶಿಕಾರಿರಾಮು, ಸಿಂದೋಳ ರಾಹುಲ್, ನಾಗಪ್ಪ, ಹಕ್ಕಿ ಪಿಕ್ಕಿ ಶ್ರೀಕಾಂತ್, ಜಂಬಣ್ಣ, ಕಿನ್ನಾರಿ ಶೇಖಪ್ಪ, ಗಿರೀಶ್, ಹನುಮಂತಪ್ಪ ಮೊದಲಾದವರು ಮನವಿ ಸಲ್ಲಿಸಿದರು.

Leave a Comment